ಶಿಗ್ಗಾಂವಿ ತಾಲೂಕಿನಲ್ಲಿ ಬೆಳೆವಿಮೆ ಗೋಲ್‌ಮಾಲ್: ಮಧ್ಯವರ್ತಿಗಳ ಕೈವಾಡ, ರೈತರ ಖಾತೆಗೆ ಹಣ ಬಾರದೆ ಲಕ್ಷಾಂತರ ಲೂಟಿ…?

Samagraphrabha
3 Min Read

ಹಾವೇರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ PMFBY ಅಡಿಯಲ್ಲಿ ರೈತರಿಗೆ ಸಿಗಬೇಕಾದ ಮುಂಗಾರು ಬೆಳೆಹಾನಿ ಪರಿಹಾರದ ಹಣದಲ್ಲಿ ಶಿಗ್ಗಾಂವಿ ತಾಲೂಕಿನಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ರೈತರು ಪಡಸಾಲೇಯ ಮೂಲೆಯಲ್ಲಿ ಕುಂತು ಮಾತನಾಡುತ್ತಿದ್ದಾರೆ.

ಮಧ್ಯವರ್ತಿಗಳು ಹಾಗೂ ಕೆಲವು ಏಜೆಂಟ್‌ಗಳ ಕೈವಾಡದಿಂದ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ.

ನಕಲಿ FID ಸೃಷ್ಟಿಸಿ ಮಧ್ಯವರ್ತಿಗಳ ಖಾತೆಗೆ ಹಣ:
ಮೂಲಗಳ ಪ್ರಕಾರ, ರೈತರ ಜಮೀನಿನ ಸರ್ವೆ ನಂಬರ್, ಸಾಗುವಳಿ ದಾರರಜೊತೆಗೆ ಹೊಂದಾಣಿಕೆಯಾಗಿ ಮೂಲ ರೈತರನ್ನು ಹೊರಗಿಟ್ಟು ಸಾಗುವಳಿ ಮಾಡುವ ರೈತನ ಮಾಲೀಕರು ಎಂಬಂತೆ ವಿವಿಧ ರೀತಿಯಲ್ಲಿ ದಾಖಲೆ ಸೃಷ್ಟಿಸಿ Farmer ID FID ಸೃಷ್ಟಿಸಿದ್ದಾರೆ.
ಇವರೊಂದಿಗೆ ಕೃಷಿ ಇಲಾಖೆಯ ಕೆಲವು ಅಧಿಕಾರಿಗಳ ಶಾಮೀಲಿನೊಂದಿಗೆ ಈ ನಕಲಿ ದಾಖಲೆಗಳನ್ನು ವಿಮಾ ಕಂಪನಿಗೆ ಸಲ್ಲಿಸಿ, ಬಿಡುಗಡೆಯಾದ ಪರಿಹಾರದ ಹಣವನ್ನು ನೇರವಾಗಿ ಮಧ್ಯವರ್ತಿಗಳ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇದರಿಂದ ನಿಜವಾದ ಫಲಾನುಭವಿ ರೈತರಿಗೆ ಒಂದೇ ಒಂದು ರೂಪಾಯಿ ಕೂಡ ತಲುಪಿಲ್ಲ.

ರೈತರಿಗಿಂತ ಮಧ್ಯವರ್ತಿಗಳ ಪಾಲು ಜಾಸ್ತಿ:
“ನಮಗೆ ಬರಬೇಕಾದ ಬೆಳೆವಿಮೆ ಹಣ ಬ್ಯಾಂಕ್‌ಗೆ ಬಂದೇ ಇಲ್ಲ. ಆದರೆ ಏಜೆಂಟ್‌ಗಳು ನಮ್ಮ ಹೆಸರಿನಲ್ಲಿ ವಿಮೆ ಮಾಡಿಸಿ ಹಣ ಡ್ರಾ ಮಾಡಿದ್ದಾರೆ” ಎಂದು ಹೆಸರು ಹೇಳಲು ಇಷ್ಟಪಡದ ರೈತರು ಆರೋಪಿಸಿದ್ದಾರೆ. ಮಧ್ಯವರ್ತಿಗಳು ರೈತರಿಗೆ ಹಣ ಬಂದ ಮೇಲೆ 50:50 ಅನುಪಾತದಲ್ಲಿ ಹಂಚಿಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವರು “ನಾವೇ ವಿಮೆ ಪ್ರೀಮಿಯಂ ಕಟ್ಟಿದ್ದೇವೆ” ಎಂದು ಹೇಳಿ, ಬಂದ ಪರಿಹಾರದಲ್ಲಿ ಕನಿಷ್ಠ 25% ಹಣ ಕೊಡುವಂತೆ ರೈತರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಈ ಕುರಿತು ನೆರೆಯ ಜಿಲ್ಲೆ ಗದಗ ನಲ್ಲಿ ಈಗಾಗಲೇ ಇಂತಹ ಅಕ್ರಮ ಕುರಿತು ಪ್ರಕರಣ ದಾಖಲಾಗಿವೆ.

- Advertisement -
Ad image

ಮಾಜಿ ವಿಮಾ ಕಂಪನಿ ಸಿಬ್ಬಂದಿಯ ಕೈವಾಡ ಶಂಕೆ:
ಈ ಇಡೀ ಅಕ್ರಮಕ್ಕೆ ಹಿಂದೆ ವಿಮಾ ಕಂಪನಿಗಳಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿಯೇ ಮಾಸ್ಟರ್‌ಮೈಂಡ್ ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ವಿಮಾ ಕಂಪನಿಯ ಸಾಫ್ಟ್‌ವೇರ್, ಖಾತೆ ಜಮಾ ಪ್ರಕ್ರಿಯೆ ಬಗ್ಗೆ ಒಳಮಾಹಿತಿ ಇದ್ದವರ ಕೈವಾಡವಿಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ನಕಲಿ FID ಸೃಷ್ಟಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ ರೈತರು.

ಅಧಿಕಾರಿಗಳ ಮೂಕ ಪ್ರೇಕ್ಷಕ ಧೋರಣೆ:
ಈ ಹಗರಣದ ಬಗ್ಗೆ ರೈತರು ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು “ಮುಖ ಜಾಣರಂತೆ” ವರ್ತಿಸುತ್ತಿದ್ದಾರೆ. ತಾಲೂಕಿನ ಕೃಷಿ ಅಧಿಕಾರಿಗಳಿಗೂ ಈ ಗೋಲ್‌ಮಾಲ್‌ನಲ್ಲಿ ಪರೋಕ್ಷ ಶಾಮೀಲು ಇರಬಹುದು ಎಂಬ ಗಂಭೀರ ಆರೋಪ ರೈತರಿಂದ ಕೇಳಿಬಂದಿದೆ.

ರೈತ ಸಂಘಟನೆಗಳ ಆಗ್ರಹ:
ಘಟನೆಯನ್ನು ಖಂಡಿಸಿರುವ ರೈತ ಸಂಘಟನೆಗಳು, ತಕ್ಷಣವೇ ಜಿಲ್ಲಾಡಳಿತ, ಲೋಕಾಯುಕ್ತ ಹಾಗೂ CID ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿವೆ. “PFMS ಪೋರ್ಟಲ್‌ನಲ್ಲಿ ಯಾವ ರೈತರ ಹಣ ಯಾರ ಖಾತೆಗೆ ಹೋಯಿತು ಎಂದು 1 ಗಂಟೆಯಲ್ಲಿ ಪತ್ತೆ ಹಚ್ಚಬಹುದು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿಸಬೇಕು ” ಎಂದು ರೈತ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ ಮನವಿ:
1. ಶಿಗ್ಗಾಂವಿ ತಾಲೂಕಿನ ಎಲ್ಲಾ PMFBY ಫಲಾನುಭವಿಗಳ ಖಾತೆಗಳ ತುರ್ತು ಆಡಿಟ್ ಮಾಡಬೇಕು.
2. ಮಧ್ಯವರ್ತಿಗಳ ಖಾತೆಗೆ ಹೋದ ಹಣವನ್ನು ತಕ್ಷಣ ಫ್ರೀಜ್ ಮಾಡಿ ರೈತರಿಗೆ ವಾಪಸ್ ಕೊಡಿಸಬೇಕು.
3. ಕಮಿಷನ್ ಕೇಳುವ ಏಜೆಂಟ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
4. ಮುಂದಿನಿಂದ ನೇರ DBT ಮೂಲಕ ರೈತರ ಆಧಾರ್ ಲಿಂಕ್ ಖಾತೆಗೆ ಮಾತ್ರ ಹಣ ಜಮಾ ಮಾಡುವ ವ್ಯವಸ್ಥೆ ಬಲಪಡಿಸಬೇಕು ಎಂದು ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.

Share this Article