ಯೋಗೀಶ್ ಗೌಡ ಹತ್ಯೆ ಪ್ರಕರಣ: ವಿನಯ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

Samagraphrabha
3 Min Read

ಬೆಂಗಳೂರು: ಧಾರವಾಡ ಜಿಲ್ಲೆಯ ಬಿಜೆಪಿ ಯುವ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟವಾಗಿದ್ದು, ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಒಟ್ಟು 16 ಆರೋಪಿಗಳಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಹಲವು ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆಯ ನಂತರ ಈ ಮಹತ್ವದ ತೀರ್ಪು ಪ್ರಕಟಿಸಿದೆ. 2016ರಲ್ಲಿ ನಡೆದ ಯೋಗೀಶ್ ಗೌಡ ಹತ್ಯೆ ಪ್ರಕರಣ ರಾಜ್ಯದ ಗಮನ ಸೆಳೆದಿದ್ದು, ರಾಜಕೀಯ ವೈಷಮ್ಯವೇ ಈ ಹತ್ಯೆಗೆ ಕಾರಣವೆಂಬ ಆರೋಪಗಳು ಕೇಳಿಬಂದಿದ್ದವು. ಪ್ರಕರಣದ ವಿಚಾರಣೆ ವೇಳೆ ಅನೇಕ ಸಾಕ್ಷಾಧಾರಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಗಳ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದೆ ಟಿಂಗರೀಕರ್‌ ಒಬ್ಬರಿಗೆ ಜೀವಾವಧಿ ಸಿಗದೆ 7 ವರ್ಷಗಳ ಜೈಲು ಮತ್ತು 30000 ದಂಡ ಪ್ರಕಟಿಸಲಾಗಿದೆ. ಇದರ ಜೊತೆಗೆ ಉಳಿದ ಅಪರಾಧಿಗಳಿಗೂ ಶಿಕ್ಷೆಯನ್ನು ಪ್ರಕಟ ಮಾಡಿದೆ. 16ಲಕ್ಷ ರೂ. ದಂಡದ ಮೊತ್ತ ವಿಧಿಸಲಾಗಿದ್ದು ಈ ಪರಿಹಾರವನ್ನು ಯೋಗೇಶ್ ಗೌಡ ಮಕ್ಕಳಿಗೆ ಹಾಗೂ ಸಹೋದರ ಗುರುನಾಥ್ ಗೌಡ ಗೆ ನೀಡಲು ಸೂಚನೆ ನೀಡಲಾಗಿದೆ.

ವಿನಯ್ ಕುಲಕರ್ಣಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದ ಚನ್ನಕೇಶವ ಟಿಂಗರೀಕರ್‌ ಸೇರಿದಂತೆ 17 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್ 15ರಂದು ದೋಷಿಗಳೆಂದು ಘೋಷಿಸಿ ಮಹತ್ವದ ತೀರ್ಪು ನೀಡಿತ್ತು.

ಗುರುವಾರವಾಕ್ಕೆ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿದ ನ್ಯಾಯಾಲವು ಸಿಬಿಐ ಮತ್ತು ಆರೋಪಿಗಳ ಪರ ವಕೀಲರ ವಾದ ಪ್ರತಿವಾದವನ್ನು ಆಲಿಸಿತು. ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು. ಬಳಿಕ ಇಂದಿಗೆ ಅಂದರೆ ಏಪ್ರಿಲ್ 17ಕ್ಕೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಪ್ರಕರಣದ 15ನೇ ಅಪರಾಧಿಯಾಗಿರುವ ಪ್ರಭಾವಿ ರಾಜಕಾರಣಿ ವಿನಯ್ ಕುಲಕರ್ಣಿ ಹತ್ಯೆಯ ಹಿಂದೆ ನಡೆದ ಒಳಸಂಚಿನಲ್ಲಿ ಭಾಗಿಯಾದ ಹಿನ್ನೆಲೆ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಉಳಿದ ಆರೋಪಿಗಳಿಗೂ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

- Advertisement -
Ad image

2016ರ ಜೂನ್‌ನಲ್ಲಿ ನಡೆದ ಕೊಲೆಗೆ ಸಂಬಂಧಿಸಿ ಯೋಗೇಶ್‌ ಗೌಡ ಕೊಲೆ ಪ್ರಕರಣ ಸಂಬಂಧ ಸುಮಾರು 8 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಸಂಜೆ ಅಂತಿಮ ತೀರ್ಪು ಪ್ರಕಟಿಸಿ ಅಪರಾಧಿಗಳೆಂದು ಘೋಷಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು, 15ನೇ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ವಿಕ್ರಮ್‌ ಬಳ‍್ಳಾರಿ, ಕೀರ್ತಿ ಕುಮಾರ್‌ ಬಸವರಾಜ್‌ ಕುರಹಟ್ಟಿ, ಸಂದೀಪ್‌ ಸವದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್‌, ಸಂತೋಷ್‌ ಸವದತ್ತಿ, ದಿನೇಶ್‌, ಅಶ್ವತ್ಥ್, ಸುನೀಲ್‌, ನಜೀರ್ ಅಹ್ಮದ್‌, ಶಹನವಾಜ್‌, ನೂತನ್‌, ಹರ್ಷಿತ್‌, ಚಂದ್ರಶೇಖರ್‌ ಇಂಡಿ, ವಿಕಾಸ್‌ ಕಲಬುರಗಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಚನ್ನಕೇಶವ ಬಿ.ಟಿಂಗರಿಕರ್‌ ಒಟ್ಟು 17 ಮಂದಿಗೆ ಶಿಕ್ಷೆ ಪ್ರಕಟಿಸಿದ್ದಾರೆ.

ಈ ಪ್ರಕರಣದಲ್ಲಿ ಮೊದಲನೇ ಆರೋಪಿ ಬಸವರಾಜ್‌ ಮುತ್ತಗಿ ಮತ್ತು 17ನೇ ಆರೋಪಿ ಶಿವಾನಂದ್‌ ಅವರನ್ನು ಮಾಫಿ ಸಾಕ್ಷಿಯನ್ನಾಗಿಸಲಾಗಿದೆ. ಜತೆಗೆ 20ನೇ ಆರೋಪಿ ವಾಸುದೇವ್‌ ರಾಮ ನೀಲೆಕಣಿ ಮತ್ತು 21ನೇ ಆರೋಪಿ ಸೋಮಶೇಖರ್‌ ಬಸಪ್ಪ ನ್ಯಾಮಗೌಡ ಅವರನ್ನು ನಿರ್ದೋಷಿಗಳೆಂದು ಕೋರ್ಟ್ ಹೇಳಿದೆ.

ಈ ತೀರ್ಪು ಧಾರವಾಡ ಪ್ರದೇಶದ ರಾಜಕೀಯ ವಾತಾವರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಪ್ರಕರಣದ ಆರಂಭದಿಂದಲೇ ತೀವ್ರ ಚರ್ಚೆಗೆ ಕಾರಣವಾಗಿದ್ದ ಈ ಹತ್ಯೆ ಪ್ರಕರಣಕ್ಕೆ ಈಗ ನ್ಯಾಯಾಲಯ ಅಂತಿಮ ಮುದ್ರೆ ಒತ್ತಿದೆ. ನ್ಯಾಯಾಲಯದ ಈ ತೀರ್ಪು ಕಾನೂನು ವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

Share this Article