ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪ್ರಜಾಟಿವಿ ಸಂಪಾದಕ ಮುತ್ತುರಾಜ್ ಗೆ ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ತುಮಕೂರಿನಲ್ಲಿ ಜನವರಿ 18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ತಿಳಿಸಿದ್ದಾರೆ.
ಮುತ್ತುರಾಜ್ ಗ್ರಾಮೀಣ ಪ್ರದೇಶದಿಂದ ಹಿಡಿದು ಸಿಲಿಕಾನ್ ಸಿಟಿಯವರಗೆ ತಮ್ಮದೇ ಆದ ಸಾಧನೆಯ ವಿಶಿಷ್ಟ ಛಾಪು ಮೂಡಿಸಿದವರು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರ ಗ್ರಾಮದವರಾದ ಇವರು ಬಾಲ್ಯದಿಂದಲೇ ಬದುಕಿನಲ್ಲಿ ಏನ್ನನ್ನಾದರೂ ಸಾಧನೆ ಮಾಡಬೇಕು ಎಂಬ ಛಲ ಹೊಂದಿದ್ದರು. ಕೃಷಿ ಕುಟುಂಬದಿಂದ ಬಂದ ಇವರಿಗೆ ಅಷ್ಟೊಂದು ಪ್ರೋತ್ಸಾಹ ಇರಲಿಲ್ಲ. ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಯುಕ್ತ ಕರ್ನಾಟಕ ಪತ್ರಿಕೆ, ಸಮಯ ಟಿವಿ, ಜನಶ್ರೀ ಟಿವಿ, ಸ್ವರಾಜ್ ನ್ಯೂಸ್, ಹೀಗೆ ಅನೇಕ ಮಾಧ್ಯಮ ಸಂಸ್ಥೆಗಳಲ್ಲಿ ವಿವಿದ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಅದರಲ್ಲೂ ಬೆಂಗಳೂರಿನ ಅಪರಾಧ ವರದಿಗಾರಿಕೆಯಲ್ಲಿ ತಮ್ಮದೆ ಆದ ವಿಶೇಷ ಛಾಪು ಮೂಡಿಸಿದವರು. ಹೆಸರಾಂತ ಪತ್ರಕರ್ತರಾದ ರವಿ ಬೆಳಗೆರೆ ಜೊತೆಗೆ ಉತ್ತಮ ಒಡನಾಟ ಹೊಂದಿದ ಅವರು ರವಿ ಬೆಳಗೆರೆ ಜೊತೆಗೆ ಜನಶ್ರೀ ಟಿವಿ ಕಟ್ಟಿ ಬೆಳೆಸಲು ಮರೆಯಲಾಗದ ಕೊಡುಗೆ ಕೊಟ್ಟವರು. ಈಗ ರಾಜ್ಯದ ಹೆಸರಾಂತ ವಾಹಿನಿಯಾದ ಪ್ರಜಾ ಟಿವಿಯಲ್ಲಿ ಪ್ರಧಾನ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.
ಇವರ ಸಾಧನೆ ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ಕೆಂಪೇಗೌಡ ಸ್ಮಾರಕ ಪ್ರಶಸ್ತಿ ನೀಡಿರುವುದು ನಿಜಕ್ಕೂ ಅಭಿನಂದನಾರ್ಹರ.

