ನೀರನ್ನು ಜಾಗೃತಿಯಿಂದ ಬಳಸುವಂತೆ ಸಚಿವ ಎಚ್‌.ಕೆ.ಪಾಟೀಲ ಮನವಿ 13.08 ಮೀಟರ್‌ಗೆ ಕುಸಿದ ಅಂತರ್ಜಲ ಮಟ್ಟ

ಸಮಗ್ರ ಪ್ರಭ ಸುದ್ದಿ
2 Min Read

ಗದಗ: ‘2023ರ ಅಕ್ಟೋಬರ್‌ನಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 6.83 ಮೀಟರ್‌ನಷ್ಟಿತ್ತು. 2024ರ ಫೆಬ್ರುವರಿ ಅಂತ್ಯದ ವೇಳೆಗೆ ಅದು 13.08 ಮೀಟರ್‌ ಕೆಳಗಿಳಿದಿದೆ. ಆದ್ದರಿಂದ ಸಾರ್ವಜನಿಕರು ಕುಡಿಯುವ ನೀರನ್ನು ಬಹಳ ಜಾಗೃತಿಯಿಂದ ಬಳಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಮನವಿ ಮಾಡಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂಡರಗಿ ತಾಲ್ಲೂಕಿನ ಅಂತರ್ಜಲ ಮಟ್ಟ 6.90 ಮೀಟರ್‌, ಗದಗ 9.53, ನರಗುಂದ 11.83, ರೋಣ 13.25, ಗಜೇಂದ್ರಗಡ 21.0, ಲಕ್ಷ್ಮೇಶ್ವರ 16.73, ಶಿರಹಟ್ಟಿ 12.8 ಮೀಟರ್‌ನಷ್ಟು ಕೆಳಗಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಅವಲೋಕಿಸಿದ್ದು, ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಪೂರೈಸುವುದು, ಬಂದ್ ಆಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸುವುದು ಸೇರಿ ನೀರಿನ ಪೂರೈಕೆಯಲ್ಲಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

‘ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಸದ್ಯ 1 ಟಿಎಂಸಿ ಅಡಿ ನೀರು ಲಭ್ಯವಿದೆ. ಅದರಲ್ಲಿ 0.5 ಟಿಎಂಸಿ ಅಡಿ ಡೆಡ್ ಸ್ಟೋರೆಜ್ ಬಿಟ್ಟು, 0.5 ಟಿಎಂಸಿ ಅಡಿ ನೀರನ್ನು ಉಪಯೋಗಿಸಬಹುದಾಗಿದೆ. ಪ್ರತಿದಿನ 0.02 ಟಿಎಂಸಿ ಅಡಿ ನೀರು ಅವಶ್ಯವಿದ್ದು, ಈಗ ಲಭ್ಯವಿರುವ ನೀರು ಮುಂದಿನ 50 ದಿನಗಳವರೆಗೆ ಆಗಲಿದೆ’ ಎಂದು ತಿಳಿಸಿದರು.

ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಹೊರತುಪಡಿಸಿ ನೀರಾವರಿಗೆ ಬಳಕೆ ಆಗದಂತೆ ತಡೆಯುವ ನಿಟ್ಟಿನಲ್ಲಿ ನೀರಾವರಿ ಇಲಾಖೆ, ಪೊಲೀಸ್ ಇಲಾಖೆ ತಂಡ ರಚಿಸಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಗದಗ ಜಿಲ್ಲೆಯಲ್ಲಿ ಈವರೆಗೆ ಟ್ಯಾಂಕರ್ ನೀರು ಪೂರೈಕೆ ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದಿಲ್ಲ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿರುವ ಮಾಹಿತಿ ಬಂದಿದ್ದು, ಸಹಾಯವಾಣಿ ತೆರೆದು ಟ್ಯಾಂಕರ್ ಮೂಲಕ ನೀರು ಪೂರೈಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೋರ್‌ವೆಲ್ ಅವಶ್ಯವಿದೆ ಎನಿಸಿದರೆ ಅಂತಹ ಸ್ಥಳಗಳಲ್ಲಿ ಕೂಡಲೇ ಕೊಳವೆಬಾವಿ ಕೊರೆಸಲು ಸೂಚಿಸಲಾಗಿದೆ ಎಂದು ಹೇಳಿದರು.

ಶುದ್ಧ ಕುಡಿಯುವ ನೀರಿನ ಕೆಲವು ಘಟಕಗಳು ಬಂದ್ ಆಗಿರುವ ಕುರಿತು ಮಾಹಿತಿ ಬಂದಿದ್ದು, ಪ್ರತಿ ತಾಲ್ಲೂಕಿಗೆ ಇಬ್ಬರು ಅಧಿಕಾರಿಗಳಂತೆ ಎಲ್ಲ ತಾಲ್ಲೂಕುಗಳಲ್ಲಿ ಒಟ್ಟು ಎಷ್ಟು ಶುದ್ದ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ ಎಂಬುದರ ಕುರಿತು ಹತ್ತು ದಿನದೊಳಗಾಗಿ ವರದಿ ತರಿಸಿಕೊಂಡು, ದುರಸ್ತಿಗೊಳಿಸಿ, ನೀರಿನ ಸಮಸ್ಯೆ ಪರಿಹರಿಸುವ ಮೂಲಕ ಸಾರ್ವಜನಿಕರ ಬಳಕೆಗೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬರಗಾಲ ಹಿನ್ನೆಲೆಯಲ್ಲಿ ಮೇವು ಸಿಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದು ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಮುಂದಾಗಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 5 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗುತ್ತಿದ್ದು, 4-5 ಟ್ರಕ್ ಲೋಡ್ ಮೇವು ಶೇಖರಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕ್ರಿಟಿಕಲ್ ಕೇರ್ ಬ್ಲಾಕ್ ಮಂಜೂರು: ಜಿಮ್ಸ್ ಆವರಣದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್‌ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ₹21.25 ಕೋಟಿ ಅನುದಾನದಲ್ಲಿ ಅದಕ್ಕೆ ಬೇಕಾಗಿರುವ ಮೋಟರೈಸ್ಡ್ ಐಸಿಯು ಬೆಡ್, ಎಮರ್ಜೆನ್ಸಿ ಬ್ಲಾಕ್, ಡಯಾಲಿಸಿಸ್ ರೂಮ್, ಆಪರೇಷನ್ ಥಿಯೇಟರ್, 24 ಹಾಸಿಗೆಗಳ ವಾರ್ಡ್ ತೆರೆಯಲು ಮಂಜೂರಾತಿ ದೊರೆತಿದ್ದು, ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.‌ಎಲ್., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ್, ವಾರ್ತಾಧಿಕಾರಿ ವಸಂತ ಮಡ್ಲೂರ, ತಹಶೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ ಇದ್ದರು.

Share this Article