ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಸಮರ್ಪಕ ಅನುಷ್ಟಾನಕ್ಕೆ ಡಿ.ಸಿ. ವೈಶಾಲಿ ಎಂ.ಎಲ್. ಸೂಚನೆ

ಸಮಗ್ರ ಪ್ರಭ ಸುದ್ದಿ
2 Min Read

ಗದಗ (ಕರ್ನಾಟಕ ವಾರ್ತೆ) ಡಿಸೆಂಬರ್ 15:ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯು ಜನಸಾಮಾನ್ಯರಿಗೆ ನಗದುರಹಿತ ಆರೋಗ್ಯ ಚಿಕಿತ್ಸೆ ನೀಡುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಜನಸಾಮಾನ್ಯರು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ ಪಡೆಯಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಆರೋಗ್ಯ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಬಿ.ಪಿ.ಎಲ್ ಪಡಿತರ ಕುಟುಂಬದ ಪ್ರತಿ ಸದಸ್ಯರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಹಾಗೂ ಎ.ಪಿ.ಎಲ್. ಪಡಿತರ ಕುಟುಂಬದ ಪ್ರತಿ ಸದಸ್ಯರಿಗೆ 1.5 ಲಕ್ಷದವರೆಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ಸೌಲಭ್ಯ ದೊರಕಲಿದೆ ಎಂದರು.

ಜಿಲ್ಲೆಯಲ್ಲಿ 9,41,247 ನಿಗದಿಪಡಿಸಿದ ಫಲಾನುಭವಿಗಳಿದ್ದು ಈ ಪೈಕಿ 3,42,290 ಫಲಾನುಭವಿಗಳು ಈಗಾಗಲೇ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಕಾರ್ಡ ಪಡೆಯುವ ಮೂಲಕ ಶೇ 36 ರಷ್ಟು ಪ್ರಗತಿಯಾಗಿದೆ. ಈ ಯೋಜನೆಯ ಪ್ರಯೋಜನವನ್ನು ಜನಸಾಮಾನ್ಯರಿಗೆ ತಿಳಿಸಿ ಜಾಗೃತಿ ಮೂಡಿಸುವ ಮೂಲಕ ಅರ್ಹ ಎಲ್ಲ ಫಲಾನುಭವಿಗಳು ನಿಗದಿತ ದಾಖಲೆ ನೀಡಿ ಕಾರ್ಡ ಪಡೆದು ಉಚಿತ ಆರೋಗ್ಯ ಸೌಲಭ್ಯ ತಮ್ಮದಾಗಿಸಿಕೊಳ್ಳಬೇಕು. ಸಂಬಂಧಿತ ಇಲಾಖೆ ಅಧಿಕಾರಿಗಳು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ ಅವರು ಮಾತನಾಡಿ ನಗದುರಹಿತ ಚಿಕಿತ್ಸೆ ಪಡೆಯುವ ಯೋಜನೆ ಈ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಾಗಿದೆ. ಈ ಯೋಜನೆಯಡಿ 1,650 ವಿವಿಧ ಹಂತದ ಚಿಕಿತ್ಸೆ ನಿಗದಿಪಡಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಹಾಗೂ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆರೋಗ್ಯ ಕಾರ್ಡ ಪಡೆಯಲು ಹತ್ತಿರದ ಕರ್ನಾಟಕ ಒನ್ ಸಿಎಸ್‍ಸಿ ಸೆಂಟರ್‍ಗಳಲ್ಲಿ ಅರ್ಜಿ ಸಲ್ಲಿಸಿ ಕಾರ್ಡ ಪಡೆಯಬಹುದು ಅಥವಾ ಫಲಾನುಭವಿಗಳೇ ನೇರವಾಗಿ ಆಯುಷ್ಮಾನ್ ಮೊಬೈಲ್ ಆಪ್ ಮೂಲಕ ನೊಂದಾಯಿಸಿ ಕಾರ್ಡ್ ಪಡೆಯಬಹುದಾಗಿದೆ ಎಂದರು.

ಆಯುಷ್ಮಾನ್ ಆಪ್: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಹೊಂದಲು ಫಲಾನುಭವಿಗಳು ಮೊದಲು ಕಾರ್ಡ ಪಡೆಯಬೇಕು. ಆಯುಷ್ಮಾನ್ ಆಪ್ ಪ್ಲೇಸ್ಟೋರ್ ನಿಂದ ಡೌನ್‍ಲೋಡ್ ಮಾಡಿಕೊಂಡು ಆಧಾರ ಲಿಂಕ್ ಇರುವ ಮೊಬೈಲ್ ಸಂಖ್ಯೆ ಬಳಸಿ ನೊಂದಾಯಿಸಿಕೊಳ್ಳಬಹುದಾಗಿದೆ.

 

Share this Article