20 ಜನರ ಮೇಲೆ ದಾಳಿ ಮಾಡಿದ ಕೋತಿ ಸೇರೆಹಿಡಿದ ಅರಣ್ಯ ಇಲಾಖೆ

graochandan1@gmail.com
2 Min Read

 

ಭೋಪಾಲ: ಮಧ್ಯಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಮೋಸ್ಟ್‌ ವಾಂಟೆಡ್‌ ಕೋತಿಯೊಂದು ಕೊನೆಗೂ ಸಿಕ್ಕಿಬಿದ್ದಿದೆ. ರಾಜ್‌ಗಢ ಪಟ್ಟಣದಲ್ಲಿ 20 ಜನರ ಮೇಲೆ ದಾಳಿ ನಡೆಸಿದ ಎರಡು ವಾರಗಳ ಬಳಿಕ ಕೋತಿ ಸೆರೆಸಿಕ್ಕಿದೆ. ಆಶ್ಚರ್ಯ ಏನೆಂದರೆ ಈ ಕೋತಿಯನ್ನು ಹಿಡಿದುಕೊಟ್ಟವರಿಗೆ 21,000 ರೂ. ಬಹುಮಾನವನ್ನು ಕೂಡ ಘೋಷಿಸಲಾಗಿತ್ತು. 21,000 ರೂ. ಅನ್ನು ಕೋತಿಗೆ ಘೋಷಿಸಲಾಗಿತ್ತು ಎಂದರೆ ಆ ಕೋತಿಯ ಉಗ್ರಾವತಾರ ಹೇಗಿತ್ತು ಎಂಬುದನ್ನು ನೀವೇ ಯೋಚಿಸಿ.

ಬುಧವಾರ ಸಂಜೆ ಉಜ್ಜಯಿನಿಯಿಂದ ಕರೆಸಲ್ಪಟ್ಟ ರಕ್ಷಣಾ ತಂಡವು ಸ್ಥಳೀಯ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸೇರಿ ಉಗ್ರರೂಪ ತಾಳಿದ್ದ ಕೋತಿಯನ್ನು ಹಿಡಿದಿದ್ದಾರೆ. ಮೊದಲು ಕೋತಿಯನ್ನು ಪತ್ತೆ ಮಾಡಲು ಡ್ರೋನ್‌ ಬಳಸಿದ ತಂಡ, ನಂತರ ಕ್ರೋಧಗೊಂಡಿದ್ದ ಕೋತಿಗೆ ಅರವಳಿಕೆ ಮದ್ದು ನೀಡಿ ಶಾಂತಗೊಳಿಸಿದ್ದಾರೆ. ಬಳಿಕ ಆ ಕೋತಿಯನ್ನು ಪಂಜರದಲ್ಲಿ ಇರಿಸಲಾಗಿದೆ.

ಇನ್ನು, ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಬಲೆಯ ಮೂಲಕ ಪ್ರಾಣಿ ರಕ್ಷಣಾ ವಾಹನಕ್ಕೆ ಸ್ಥಳಾಂತರಿಸಿದರು ಬಳಿಕ ಕೋತಿಗೆ ಪ್ರಜ್ಞೆ ಬಂದಿದೆ. ಈ ಕೋತಿಯ ಉಪಟಳ ಎಷ್ಟು ಹೆಚ್ಚಾಗಿತ್ತು ಎಂದರೆ ಕೋತಿಯನ್ನು ಕಾಯಲು ಜನರು ತಮ್ಮ ಮನೆ ಮಹಡಿಗಳ ಮೇಲೆ ಬಂದೂಕು ಹಿಡಿದು ನಿಲ್ಲುವಂತಾಗಿತ್ತು.

- Advertisement -
Ad image

ಕಳೆದ ಹದಿನೈದು ದಿನಗಳ ಹಿಂದೆ ಈ ಕೋತಿ 20 ಜನರ ಮೇಲೆ ದಾಳಿ ನಡೆಸಿತ್ತು. ಈ ಪೈಕಿ ಎಂಟು ಮಕ್ಕಳು ಸೇರಿದ್ದರು. ಮನೆಯ ಛಾವಣಿ ಹಾಗೂ ಕಿಟಕಿಯ ಸರಳುಗಳ ಮೇಲೆ ಕೂರುತ್ತಿದ್ದ ಕೋತಿ ದಿಢೀರ್‌ ಎಂದು ಜನರ ಮೇಲೆ ದಾಳಿ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋತಿ ದಾಳಿಗೆ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಮಂಗನ ಕೃತ್ಯಗಳು ಸೆರೆಯಾಗಿದ್ದು, ದೃಶ್ಯಗಳನ್ನು ನೋಡಿದ ಎಂತವರಿಗೂ ಇದು ಕೋತಿನಾ ಎಂಬ ಪ್ರಶ್ನೆ ಮೂಡುತ್ತದೆ.

ಹೀಗಾಗಿ ಕೋತಿಯನ್ನು ಸೆರೆಹಿಡಿಯಲು ಮಾಡಿದ ಪ್ರಯತ್ನಗಳು ವಿಫಲವಾದ ಬಳಿಕ ಅಧಿಕಾರಿಗಳು ಕೋತಿಯನ್ನು ಹಿಡಿದುಕೊಟ್ಟವರಿಗೆ 21,000 ರೂ. ನಗದು ಬಹುಮಾನವನ್ನು ಘೋಷಿಸಿದರು. ಜೊತೆಗೆ ವಿಶೇಷ ರಕ್ಷಣಾ ತಂಡವನ್ನು ಕೂಡ ಕೋತಿಯ ಸೆರೆಗೆ ಆಹ್ವಾನಿಸಿದ್ದರು. ನಾಲ್ಕು ಗಂಟೆಯ ಸತತ ಕಾರ್ಯಾಚರಣೆ ಬಳಿಕ ಕೋತಿಯನ್ನು ಸೆರೆಹಿಡಿಯಲಾಗಿದೆ. ಸೆರೆಹಿಡಿದ ಕೋತಿಯನ್ನು ಜನರಿಂದ ದೂರವಿರುವ ದಟ್ಟವಾದ ಅರಣ್ಯದಲ್ಲಿ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮಗೆ ಕೋತಿಯನ್ನು ಹಿಡಿಯಲು ಆಗಲಿಲ್ಲ. ಆದ್ದರಿಂದ ನಾವು ಜಿಲ್ಲಾಧಿಕಾರಿಗಳ ಸಹಾಯ ತೆಗೆದುಕೊಂಡು ಉಜ್ಜಯಿನಿಯ ಅರಣ್ಯ ಇಲಾಖೆಯ ರಕ್ಷಣಾ ತಂಡ ಕರೆಸಿದೇವು. ಅವರಿಗೆ ಪಾಲಿಕೆ ಸಿಬ್ಬಂದಿ ಮತ್ತು ಸ್ಥಳೀಯರು ಸಹಾಯ ಮಾಡಿದರು. ಹೀಗಿದ್ದರೂ ಕೂಡ ಕೋತಿಯನ್ನು ಹಿಡಿಯಲು ನಾಲ್ಕು ಗಂಟೆ ಸಮಯ ಬೇಕಾಯಿತು. ಕೋತಿಯನ್ನು ಹಿಡಿದವರಿಗೆ 21,000 ರೂಪಾಯಿ ಬಹುಮಾನವನ್ನು ಘೋಷಿಸಿದ್ದೇವು. ಈಗ ಅದನ್ನು ಪ್ರಾಣಿ ರಕ್ಷಣಾ ತಂಡಕ್ಕೆ ನೀಡುತ್ತೇವೆ ಎಂದು ರಾಜ್‌ಗಢ ಪುರಸಭೆ ಅಧ್ಯಕ್ಷ ವಿನೋದ್‌ ಸಾಹು ಹೇಳಿದ್ದಾರೆ.

Share this Article