ನಿಷ್ಕಾಳಜಿ ತೋರದೇ ನೈತಿಕ ಮತದಾನ ಮಾಡಿ : ಡಾ.ಬಿ.ಸುಶೀಲಾ

ಸಮಗ್ರ ಪ್ರಭ ಸುದ್ದಿ
3 Min Read

ಡಂಬಳದಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಕಾಲ್ನಡಿಗೆ ಜಾಥ

ಗದಗ : ಮತದಾನ ಪ್ರಜಾಪ್ರಭುತ್ವದ ಹಬ್ಬ. ಮೇ 10 ರಂದು ಜರುಗುವ ಮತದಾನದಲ್ಲಿ ನಿಷ್ಕಾಳಜಿ ತೋರದೇ ನೈತಿಕವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳೋಣ. ಇತರರನ್ನು ಮತದಾನದಿಂದ ಹೊರಗುಳಿಯದಂತೆ ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಬಿ. ಸುಶೀಲಾ ಅವರು ಹೇಳಿದರು.

ಶುಕ್ರವಾರ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಕಡ್ಡಾಯ ಮತದಾನ ಹಾಗೂ ಮತದಾನ ಜಾಗೃತಿಗಾಗಿ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ, ಆಹ್ವಾನಿತ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅರ್ಹ ಮತದಾರರು ತಪ್ಪದೇ ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಹಾಗಾಗಿ ಎಲ್ಲರೂ ತಪ್ಪದೇ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು. ಬೇರೆ ಸ್ಥಳಗಳಲ್ಲಿ ವಾಸವಿರುವ ನಿಮ್ಮ ಸಂಬಂಧಿಕರು, ನೆಂಟರ ಮತಗಳು ವ್ಯರ್ಥವಾಗದಂತೆ ಎಲ್ಲರಿಗೂ ತಿಳಿಸಿ ಮೇ10ರಂದು ತಪ್ಪದೇ ಮತ ಚಲಾಯಿಸಲು ಮಾಹಿತಿ ನೀಡಿ ಎಂದರು.

ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ ಮೇ 10 ರಂದು ಅತ್ಯಂತ ಕಾಳಜಿಯಿಂದ ಮತದಾನ ಮಾಡಿ. ಎಲ್ಲರಿಗೂ ತಿಳುವಳಿಕೆ ಹೇಳುವ ಮೂಲಕ ಮತದಾನ ಮಾಡಿಸಿ. ನಿರ್ಭೀತ ಮತದಾನಕ್ಕಾಗಿ ಪೋಲಿಸ್ ಇಲಾಖೆ ನಿಮ್ಮ ಜೊತೆಗಿದೆ ಎಂದರು.
ಇದಕ್ಕೂ ಮುನ್ನ ಸಶಸ್ತ್ರ ಸೀಮಾ ಬಲ ತಂಡದೊಂದಿಗೆ ತಾಲೂಕಿನ ಸರಕಾರಿ ನೌಕರರು, ಗ್ರಾಪಂ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ ತೋಂಟದಾರ್ಯ ಕಲಾಭವನದ ಆವರಣದಿಂದ ಆರಂಭಗೊಂಡು ಗ್ರಾಮದ ಮೇನ್ ಬಜಾರ್ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಹಾಯ್ದು ಆಹ್ವಾನಿತ ಕುಸ್ತಿ ಪಂದ್ಯಾವಳಿ ನಡೆಯುವ ಸರಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆಗೆ ತಲುಪಿತು. ಇನ್ನು ಇದೇ ವೇಳೆ ಮುಂಡರಗಿ ತಾಲೂಕು ಪಂಚಾಯತ ಹಾಗೂ ವಿವಿಧ ಗ್ರಾಮ ಪಂಚಾಯತ ಸಿಬ್ಬಂದಿಗಳು ಪಾರಂಪರಿಕ ಹಾಗೂ ಸಾಂಸ್ಕೃತಿಕ ವೇಷಭೂಷಣ ಧರಿಸಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು.

ನಂತರ ಮತದಾನ ಜಾಗೃತಿ ಉದ್ದೇಶದಿಂದ ಗ್ರಾಮೀಣ ಕ್ರೀಡೆ ಉತ್ತೇಜಿಸುವ ಇರಾದೆಯಲ್ಲಿ ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಅಂತರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ ಅವರ ತಂಡದಿಂದ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಹ್ವಾನಿತ ಕುಸ್ತಿ ಪಂದ್ಯಗಳು ನಡೆದವು. ಗ್ರಾಮದ ಪೈಲ್ವಾನ ಮೈಲಾರೆಪ್ಪ ಮೂಲಿಮನಿ ಅವರಿಂದ ವಿವಿಧ ಕೆಜಿಯ ಭಾರದ ಕಲ್ಲು ಎತ್ತುವ ಪ್ರದರ್ಶನ ಸಹ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ ಹನಗಂಡಿ, ಸಹಾಯಕ ನಿರ್ದೇಶಕ ವಿಶ್ವನಾಥ ಹೊಸಮನಿ (ಗ್ರಾ.ಉ), ಮಂಜುಳಾ ಬಾರಕೇರ, ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ್) ಜಿಲ್ಲೆಯ ಎಲ್ಲ ತಾಲೂಕಿನ ತಾಲೂಕು ಪಂಚಾಯತ್ ಸಿಬ್ಬಂದಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ನೌಕರರು ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ಗ್ರಾಮದ ಮಾಜಿ ಪೈಲ್ವಾನರಾದ ಮರಿತಮ್ಮಪ್ಪ ಆದಮ್ಮನವರ, ದೇವಪ್ಪ ಗಡಾದ, ಹೊನ್ನಪ್ಪ ಪೈಲ್ವಾನ ಹಾಗೂ ಇತರರು ಇದ್ದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯತ ಸಿಇಓ ಡಾ.ಬಿ ಸುಶೀಲಾ ಅವರು ಜಾಥಾ ಉದ್ದಕ್ಕೂ ಸಾಂಪ್ರದಾಯಿಕ ವೇಷಭೂಷಣದ ಮೂಲಕ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಗಮನ ಸೆಳೆದರು. ಇನ್ನು ರೋಣ, ಗದಗ, ಶಿರಹಟ್ಟಿ, ಮುಂಡರಗಿ ಮಹಿಳಾ ಪಿಡಿಓ ಹಾಗೂ ತಾಲೂಕು ಪಂಚಾಯತ ಸಿಬ್ಬಂದಿ ಹಾಗೂ ವಿವಿಧ ಗ್ರಾಮ ಪಂಚಾಯತ ಸಿಬ್ಬಂದಿಗಳು ಸಹ ಸಾಂಸ್ಕೃತಿಕ ವೇಷಭೂಷಣದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.

ಜಾಥಾ ವಿಶೇಷತೆಗಳು:
• ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿಗಳು
• ಸಶಸ್ತ್ರ ಸೀಮಾ ಬಲ, ಪೊಲೀಸರಿಂದ ಆಕರ್ಷಕ ಪಥ ಸಂಚಲನ
• ಹಿರಿಯ ಹಾಗೂ ಯುವ ಮತದಾರರಿಂದ ಕುಸ್ತಿ ಹಾಗೂ ಗುಂಡು ಕಲ್ಲು ಎತ್ತುವ ಪ್ರದರ್ಶನ
• ಮಹಿಳಾ ಕುಸ್ತಿ ಪಟುಗಳಿಂದ ಕುಸ್ತಿ ಪ್ರದರ್ಶನ
• ನೈತಿಕ ಹಾಗೂ ವಿಶ್ವಾಸಾರ್ಹ ಮತದಾನದ ಕುರಿತು ಮೊಳಗಿದ ಘೋಷವಾಕ್ಯ
• ಮತದಾನ ನಮ್ಮ ಹಕ್ಕು ಅರ್ಹರಿಗೆ ಮತ ಚಲಾಯಿಸೋಣ

 

Share this Article