ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾದ ಹಳ್ಳಿ ಹೈದ ಅಜಯ ,ಜಕ್ಕಲಿ ಗ್ರಾಮದ ರೈತನ ಮಗನ ಹೆಮ್ಮೆಯ ಸಾಧನೆ

Samagraphrabha
2 Min Read

ನರೇಗಲ್: ಓದಿನಲ್ಲಿ ಶ್ರದ್ಧೆ ಹಾಗೂ ಪರಿಶ್ರಮವಿದ್ದರೆ ಗ್ರಾಮೀಣ ಭಾಗದ ರೈತರ ಮಕ್ಕಳು ಸಹ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ನರೇಗಲ್‌ ಹೋಬಳಿ ಜಕ್ಕಲಿ ಗ್ರಾಮದ ಯುವಕ ಅಜಯ ಎಸ್.‌ ದೊಡ್ಡಮೇಟಿ ಇವರು ಮೇ ತಿಂಗಳಲ್ಲಿ ಪ್ರಕಟವಾದ ಅಖಿಲ ಭಾರತ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ನಿರೂಪಿಸಿದ್ದಾರೆ.
ಕಲಿಕೆಗೆ ಅಗತ್ಯವಾಗಿ ಬೇಕಾಗುವ ಮೂಲ ಸೌಕರ್ಯಗಳಿಲ್ಲದ ಹಳ್ಳಿಯಲ್ಲಿ ಬೆಳೆದು ಎರಡು ಬಾರಿ ವಿಫಲವಾದರು ಸಹ ಧೃತಿಗೆಡದೆ ನಿರಂತರ ಅಧ್ಯಯನ ನಡೆಸಿ ಮೂರನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೆ ನರೇಗಲ್‌ ಹೋಬಳಿ ವ್ಯಾಪ್ತಿಯ ಹಳ್ಳಿಗಳಿಂದ ಸಿಎ ಪಾಸಾದ ಮೊದಲಿಗನಾಗಿದ್ದಾನೆ.
ಮೂಲತಃ ಕೃಷಿ ಕುಟುಂಬದ ಹಿನ್ನಲೆಯನ್ನು ಹೊಂದಿರುವ ಸಿಎ ಪಾಸಾದ ಯುವಕನ ತಂದೆ ಸುಭಾಸ ದೊಡ್ಡಮೇಟಿ 7ನೇ ತರಗತಿವರೆಗೆ ಓದಿದ್ದು ಜಕ್ಕಲಿಯಲ್ಲಿರುವ 18 ಎಕರೆ ಒಣ ಬೇಸಾಯದ ಜಮೀನನ್ನು ನೋಡಿಕೊಳ್ಳುತ್ತಾರೆ. ತಾಯಿ ಶಕುಂತಲಾ ಅವರು ಮನೆ ನಿರ್ವಹಣೆಯ ಜೊತೆಗೆ ಕೃಷಿಕ ಮಹಿಳೆಯಾಗಿದ್ದಾರೆ. ಅಜಯ ಕಾಲೇಜಿನ ದಿನಗಳ ವರೆಗೂ ತಂದೆಯ ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಹೆಚ್ಚಿನ ಅಭ್ಯಾಸಕ್ಕಾಗಿ ಬೆಂಗಳೂರಿಗೆ ಹೋದ ನಂತರ ಊರಿಗೆ ಬಂದಾಗ ಜಮೀನು ಕೆಲಸದಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ.
1 ರಿಂದ 7ನೇ ತರಗತಿಯ ಪ್ರಾಥಮಿಕ ಶಿಕ್ಷಣವನ್ನು ನರೇಗಲ್‌ ಪಟ್ಟಣದ ಪಿಎಸ್‌ಎಸ್‌ ಶಾಲೆಯಲ್ಲಿ, 10ನೇ ತರಗತಿ ವರೆಗೆ ಗದಗ ನಗರದ ಲೋಯಲಾ ಪ್ರೌಢಶಾಲೆಯಲ್ಲಿ, ಪಿಯುಸಿ ಹಾಗೂ ಬಿಕಾಂ ಪದವಿಯನ್ನು ಗದಗ ನಗರದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 68, ಪಿಯುಸಿ ಯಲ್ಲಿ ಶೇ 77.10 ಹಾಗೂ ಪದವಿಯಲ್ಲಿ ಶೇ 88 ರಷ್ಟು ಅಂಕವನ್ನು ಪಡೆದಿದ್ದಾರೆ. ಎಲ್ಲಾ ಪರೀಕ್ಷೆಯಲ್ಲೂ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣನಾದ ಇವರಿಗೆ ಶಿಕ್ಷಕರು ಉನ್ನತ ಸಾಧನೆಗಳ ಕುರಿತು ಕನಸು ಬಿತ್ತಿದ್ದಾರೆ. ಆ ಕನಸು ಪ್ರಬಲವಾಗತೊಡಗಿ ಸಿಎ ತಮ್ಮ ಗುರಿಯಾಗಿಸಿಕೊಂಡರು. ಅದರ ಬಗ್ಗೆ ಮಾಹಿತಿ ಸಂಗ್ರಹ ಹಾಗೂ ಅಧ್ಯಯನ ಆರಂಭಿಸಿದರು. ಉಪನ್ಯಾಸಕರು ಹಾಗೂ ಸಿನಿಯರ್ಸ್‌ ನೀಡಿದ ಸಲಹೆ ಮೇರೆಗೆ ಬೆಂಗಳೂರಿನಲ್ಲಿ ಸಿಎ ತರಬೇತಿ ಪಡೆದಿದ್ದಾರೆ. ಅಲ್ಲಿ ಸಿಕ್ಕ ತರಬೇತುದಾರ ಜಿ. ಜಿ. ಪಾಟೀಲ ಅವರ ಸ್ಪೂರ್ತಿದಾಯಕ ಮಾರ್ಗದರ್ಶನ, ತಂದೆ-ತಾಯಿ ಪ್ರೋತ್ಸಾಹ, ಅಕ್ಕ-ಭಾವನ ಸಹಾಯದಿಂದಾಗಿ ನಿರಂತರ ಆರುವರೆ ವರ್ಷದ ಅಧ್ಯಯನದ ಫಲವಾಗಿ ಚಾರ್ಟರ್ಡ್ ಅಕೌಂಟಂಟಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂಬುದನ್ನು ಅವರು ಸ್ಮರಿಸುತ್ತಾರೆ. ಸಿಎ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ದೊಡ್ಡಮೇಟಿ ಕುಟುಂಬದ ಹಾಗೂ ನಮ್ಮೂರಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಸಾಹಿತಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.

1: ಸತತ ಪ್ರಯತ್ನ, ಶ್ರದ್ಧೆ, ಬದ್ಧತೆ ಯಶಸ್ಸಿನ ಗುಟ್ಟಾಗಿವೆ. ಕಡಿಮೆ ಅಂಕ ಪಡೆದಾಗ ಎದೆಗುಂದಬಾರದು. ಗ್ರಾಮೀಣ ಭಾಗದಲ್ಲಿ ನನ್ನಂತೆ ಬಹಳಷ್ಟು ಪ್ರತಿಭೆಗಳಿವೆ ಅವರಿಗೆ ಸೂಕ್ತ ಅವಕಾಶ ಸಿಗಬೇಕಿದೆ
 ಅಜಯ ಎಸ್.‌ ದೊಡ್ಡಮೇಟಿ, ಸಿಎ ಪರೀಕ್ಷೆ ಪಾಸಾದ ಯುವಕ

2: ರೈತರ ಮಕ್ಕಳು ದೊಡ್ಡ ಪರೀಕ್ಷೆಗಳನ್ನು ಪಾಸಾಗುವುದು ಅಪರೂಪ ಆದರೆ ನಮ್ಮ ಮಗ ಅಂತಹ ಸಾಧನೆ ಮಾಡುವ ಮೂಲಕ ನಮ್ಮೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ
 ಸುಭಾಸ, ಶಕುಂತಲಾ, ಪಾಲಕರು

Share this Article