ಬೆಂಗಳೂರು: ಉದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ಅವರ ಪುತ್ರ ಹಾಗೂ ಯುವ ನಾಯಕ ಮತ್ತು ಉದ್ಯಮಿ ಜೋಸ್ ಚಾರ್ಲ್ಸ್ ಮಾರ್ಟಿನ್ ಅವರು ಈಗಾಗಲೇ ಪುದುಚೇರಿಯಲ್ಲಿ ತಮ್ಮದೇ ಆದ ಎಲ್.ಜೆ.ಕೆ (LJK) ಪಕ್ಷವನ್ನು ಸ್ಥಾಪಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿ ರಾಜಕೀಯ ಸಂಚಲನ ಮೂಡಿಸಿದ್ದಾರೆ.
ಇದೀಗ, ತಮ್ಮ ರಾಜಕೀಯ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಮುಂದಾಗಿರುವ ಅವರು, ಕರ್ನಾಟಕದಲ್ಲೂ ಕೂಡ ಎಲ್.ಜೆ.ಕೆ (LJK) ಪಕ್ಷವನ್ನು ಸಂಘಟಿಸಲು ಸನ್ನದ್ಧರಾಗಿದ್ದಾರೆ. ಕರ್ನಾಟಕದ ರಾಜಕೀಯ ಭವಿಷ್ಯ ಮತ್ತು ಪಕ್ಷದ ಮುಂದಿನ ಪೂರ್ವತಯಾರಿಗಳ ಕುರಿತು ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡರು.
ಕರ್ನಾಟಕದ ಅಭಿವೃದ್ಧಿ ಮತ್ತು ಅಸ್ಮಿತೆಯ ದೃಷ್ಟಿಯಿಂದ ಪ್ರಾದೇಶಿಕ ಪಕ್ಷಗಳ ಪಾತ್ರ ಬಹಳ ದೊಡ್ಡದು. ರಾಷ್ಟ್ರೀಯ ಪಕ್ಷಗಳು ರಾಷ್ಟ್ರಮಟ್ಟದ ಕಾರ್ಯಸೂಚಿಗಳಿಗೆ ಹೆಚ್ಚು ಒತ್ತು ನೀಡುವಾಗ, ರಾಜ್ಯದ ವಿಶಿಷ್ಟ ಸಮಸ್ಯೆಗಳು ಕೆಲವೊಮ್ಮೆ ಹಿನ್ನೆಲೆಗೆ ಸರಿಯಬಹುದು. ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆಯ ಕುರಿತು ಜೋಸ್ ಚಾರ್ಲ್ಸ್ ಮಾರ್ಟಿನ್ ತಿಳಿಸಿದರು. LJK ಪಕ್ಷದಲ್ಲಿ ಯುವಕರಿಗೆ, ಮಹಿಳೆಯರಿಗೆ ಪ್ರಾಮುಖ್ಯತೆ ಕೊಡಲಾಗುವುದು. ಕರ್ನಾಟದಲ್ಲಿ LJK ಪಕ್ಷದಿಂದ ಕೈಗೊಳ್ಳುವ ಕಾರ್ಯಚಟುವಟಿಕೆಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಜೋಸ್ ಚಾರ್ಲ್ಸ್ ಮಾರ್ಟಿನ್ ತಿಳಿಸಿದರು.
