ರೈತರಿಂದ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ  ಗ್ರಾಮ ಲೆಕ್ಕಾಧಿಕಾರಿ

Samagraphrabha
1 Min Read

ಹಾವೇರಿ: ಖಾತೆ ಬದಲಾವಣೆಗಾಗಿ 8,500 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ತಾಲೂಕು ನೆಗಳೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಫಕ್ಕಿರೇಶ್ ಬಾರ್ಕಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ. 8500 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್‌ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಫಕ್ಕಿರೇಶ್ ಸಿಕ್ಕಿಬಿದ್ದಿದ್ದಾರೆ.

ನೆಗಳೂರು ಗ್ರಾಮದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಫಕ್ಕಿರೇಶ್ ಅವರನ್ನು ಲೋಕಾಯುಕ್ತ‌ ಅಧಿಕಾರಿಗಳು ಬಂಧಿಸಿದ್ದಾರೆ. ಬಸಾಪುರ ಗ್ರಾಮದ ರೈತ ಕರಿಯಲ್ಲಪ್ಪ ಕೆಸರಳ್ಳಿ ಎಂಬುವರ ಬಳಿ ಖಾತೆ ಬದಲಾವಣೆಗೆ ಫಕ್ಕಿರೇಶ್ 63 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎಂದು ದೂರುದಾರ ರೈತ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದರು.

ಈ ಮೊದಲು ಕರಿಯಲ್ಲಪ್ಪನಿಂದ 30 ಸಾವಿರ ಹಣ ಪಡೆದು ಕೆಲಸ ಅಪೂರ್ಣ ಮಾಡಿದ್ದು, ಗುರುವಾರ(ಫೆ.26) ಮತ್ತೆ 8,500 ರೂಪಾಯಿ ಪಡೆಯಲು ಫಕ್ಕಿರೇಶ್ ಮುಂದಾಗಿದ್ದರು. ಲಂಚ ಸ್ವೀಕಾರ ಮಾಡುತ್ತಿದ್ದ ಸಂದರ್ಭದಲ್ಲೇ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ಹಿಡಿದಿದ್ದಾರೆ.

ಆರೋಪಿ ಫಕ್ಕಿರೇಶ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾವೇರಿ ಲೋಕಾಯುಕ್ತ ಸಿಪಿಐ ಶ್ರೀದೇವಿ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ.

- Advertisement -
Ad image

Share this Article