ಗದಗ: ಸರಕಾರದ ಉಚಿತ ಪೋಡಿಮುಕ್ತ ಯೋಜನೆಯಡಿ ಮಾಡಬೇಕಾದ ಜಮೀನು ಸಂಬಂಧಿತ ಕೆಲಸಕ್ಕೆ ಲಂಚ ಬೇಡಿಕೆ ಇಟ್ಟು ಹಣ ಸ್ವೀಕರಿಸಿದ ಆರೋಪದಲ್ಲಿ ಗದಗ ಕರ್ನಾಟಕ ಲೋಕಾಯುಕ್ತ ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಹರ್ಲಾಪುರ ಗ್ರಾಮದ ನಿವಾಸಿ ಶ್ರೀ ಗಣೇಶ ಅಂದಪ್ಪ ಮುಂಡರಗಿ ಅವರು, ಒಂದು ತಿಂಗಳ ಹಿಂದೆ ಹರ್ಲಾಪುರದಲ್ಲಿ 6 ಗುಂಟೆ ಜಮೀನನ್ನು ಖರೀದಿಸಿದ್ದು, ಅದು ಮೂಲ ಮಾಲೀಕರೊಂದಿಗೆ ಜಂಟಿ ಉತಾರವಾಗಿದ್ದು, ಪೋಡಿ ಮಾಡಬೇಕಾದ ಅಗತ್ಯವಿತ್ತು. ಈ ಸಂಬಂಧ ಸರಕಾರದ ಉಚಿತ ಪೋಡಿಮುಕ್ತ ಯೋಜನೆಯಡಿ ಗದಗ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಎರಡು ಬಾರಿ ಭೇಟಿ ನೀಡಿದ್ದರು.
ಆದರೆ, ಅಲ್ಲಿ ಅರ್ಜಿ ವಿಚಾರಣೆ ಮಾಡುತ್ತಿದ್ದ ಮೋಜಣಿ ಡಾಟಾ ಎಂಟ್ರಿ ಆಪರೇಟರ್ ಶ್ರೀಮತಿ ಕವಿತಾ ವಿ. ಚಿಕ್ಕಮಠ ಅವರು ಮೊದಲಿಗೆ 3,000 ರೂ ಹಾಗೂ ನಂತರ 2,500 ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉಚಿತವಾಗಿ ನಡೆಯಬೇಕಾದ ಸರಕಾರಿ ಕೆಲಸಕ್ಕೆ ಲಂಚ ಕೇಳಿ ಪದೇಪದೇ ಅಲೆದಾಡಿಸಿದ್ದ ಹಿನ್ನೆಲೆಯಲ್ಲಿ ಫಿರ್ಯಾದಿದಾರರು ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದರು.
ಈ ದೂರಿನ ಮೇರೆಗೆ, ದಿನಾಂಕ 03-02-2026 ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಫಿರ್ಯಾದಿದಾರರು ಕಚೇರಿಗೆ ತೆರಳಿ ತಮ್ಮ ಕೆಲಸದ ಕುರಿತು ವಿಚಾರಿಸಿದಾಗ, ಶ್ರೀಮತಿ ಕವಿತಾ ವಿ. ಚಿಕ್ಕಮಠ ಅವರು 2,500 ರೂ ಹಣ ಕೇಳಿದ್ದು, ಅವರ ಸೂಚನೆಯಂತೆ ಕಚೇರಿಯ ಹೊರಗುತ್ತಿಗೆ ಬಾಂದ ಜವಾನರಾದ ಶ್ರೀ ನಾಗೇಶ ಗಣಪ ಬಡಿಗೇರ (ಸಾ: ಹರ್ಲಾಪುರ) ಅವರು ಲಂಚದ ಹಣವನ್ನು ಸ್ವೀಕರಿಸಿದ್ದಾರೆ. ಈ ವೇಳೆ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ಬಣ್ಣಬಣ್ಣದ ದಾಳಿಯಲ್ಲಿ ಬಂಧಿಸಿದ್ದಾರೆ.
ಈ ಕಾರ್ಯಾಚರಣೆ ಮಾನ್ಯ ಲೋಕಾಯುಕ್ತ ಎಸ್ಪಿ ಶ್ರೀ ಎಸ್.ಟಿ. ಸಿದ್ದಲಿಂಗಪ್ಪ (ಧಾರವಾಡ) ಅವರ ಮಾರ್ಗದರ್ಶನದಲ್ಲಿ, ಗದಗ ಲೋಕಾಯುಕ್ತ ಠಾಣೆಯ ಇನ್ಸಪೆಕ್ಟರ್ ಶ್ರೀಮತಿ ಎಸ್.ಎಸ್. ತೇಲಿ ಹಾಗೂ ಸಿಬ್ಬಂದಿಗಳಾದ ಹಸನ್, ಗಾರ್ಗಿ, ಬಾರಡ್ಡಿ, ಡಿಡಗೂರು, ಸಂಗನಾಳ, ಜವಳಿ, ಅಂಬಿಗೇರ, ಹಿರೇಮಠ, ನೈನಾಪುರ ಅವರುಗಳ ಸಹಕಾರದಿಂದ ನಡೆದಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಇದಲ್ಲದೆ, ಯಾವುದೇ ಸರಕಾರಿ ಕಚೇರಿಯಲ್ಲಿ ಸರಕಾರಿ ಕೆಲಸಕ್ಕಾಗಿ ಲಂಚ ಅಥವಾ ಇತರೆ ಅಕ್ರಮ ಬೇಡಿಕೆ ಇಟ್ಟಲ್ಲಿ, ಸಾರ್ವಜನಿಕರು ಧೈರ್ಯವಾಗಿ ಗದಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡುವಂತೆ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.

