ಗದಗ: ಗುತ್ತಿಗೆದಾರನ ಬಿಲ್ ಪಾವತಿಸಲು ಲಂಚ ಕೇಳಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗದಗ ಜಿಲ್ಲೆಯಲ್ಲಿ (ಸೆ.8) ರಂದು ಬೆಳಕಿಗೆ ಬಂದಿದೆ.
ಮಹೇಶ ರಾಠೋಡ ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್, ಯಾದಗಿರಿ ಜಿಲ್ಲೆಯ ತಂಗಡಗಿ ಪಟ್ಟಣದ ಗುತ್ತಿಗೆದಾರ ಶರಣಪ್ಪ ತಂಗಡಗಿ ಅವರಿಂದ ₹4 ಲಕ್ಷ 60 ಸಾವಿರ ರೂಪಾಯಿಗಳ ಲಂಚ ಬೇಡಿಕೆ ಇಟ್ಟಿದ್ದಾನೆಂಬ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದರು.
ಮಾಹಿತಿಯ ಪ್ರಕಾರ, ರೋಣ ತಾಲೂಕಿನ ವ್ಯಾಪ್ತಿಯಲ್ಲಿ ಶರಣಪ್ಪ ತಂಗಡಗಿ 2ನೇ ದರ್ಜೆ ಗುತ್ತಿಗೆದಾರನಾಗಿದ್ದು, ಆನ್ ಲೈನ್ ಮೂಲಕ ಟೆಂಡರ್ ಹಾಕಿ ರೋಣ ತಾಲೂಕಿನ 01 ಕಾಮಗಾರಿಯನ್ನ 34 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ ಕಾಮಗಾರಿ ಮುಗಿದು ಸುಮಾರು ಆರು ತಿಂಗಳು ಕಳೆದರೂ, ಬಿಲ್ ಪಾವತಿಸಲು ಸಹಾಯಕ ಇಂಜಿನಿಯರ್ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿತ್ತು.
ಈ ನಡುವೆ ಬಿಲ್ ಪ್ರಕ್ರಿಯೆ ಮುಂದುವರಿಸಲು, ಶರಣಪ್ಪನಿಂದ ₹4 ಲಕ್ಷ 60 ಸಾವಿರ ಲಂಚವನ್ನು ಬೇಡಿದ್ದಾನೆಂದು ಮಹೇಶ ರಾಠೋಡ ವಿರುದ್ಧ ಗುತ್ತಿಗೆದಾರರು ಲೋಕಾಯುಕ್ತ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದ್ದರು.
ದೂರು ಸ್ವೀಕರಿಸಿದ ಲೋಕಾಯುಕ್ತ ತಂಡ, ಖಚಿತ ಮಾಹಿತಿ ಮೇರೆಗೆ ಬಲೆಗೆ ಬೀಸಿದ ಪರಿಣಾಮ, ಗಜೇಂದ್ರಗಡದ ಬಂಡಿ ಪೆಟ್ರೋಲ್ ಬಂಕ್ ಸಮೀಪದ ಬಯಲು ಪ್ರದೇಶದಲ್ಲಿ ಲಂಚದ ಹಣ ಸ್ವೀಕರಿಸುವ ವೇಳೆ ಮಹೇಶ ರಾಠೋಡ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಗುತ್ತಿಗೆದಾರರಿಂದ ಮುಂಗಡವಾಗಿ ₹3 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ನಗದು ಹಣದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.

ದಾಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸ್ಥಳದಲ್ಲೇ ಸಾಕ್ಷ್ಯ ಸಂಗ್ರಹ ನಡೆಸಿ, ಇಂಜಿನಿಯರ್‌ನಿಂದ ಲಂಚದ ಹಣ ವಶಪಡಿಸಿಕೊ೦ಡಿದ್ದಾರೆ. ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆಗೆ ಒಳಪಡಿಸಲಾಗಿದೆ.
ಈ ದಾಳಿಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ, ಗದಗ ಉಪ ಪೊಲೀಸ್ ಅಧೀಕ್ಷಕ ವಿಜಯ ಬಿರಾದಾರ ಅವರ ನೇತೃತ್ವದಲ್ಲಿ ನಡೆಸಲಾಯಿತು. ತನಿಖಾಧಿಕಾರಿ ಎಸ್.ಎಸ್. ತೇಲಿ, ಪಿಐ ಪರಮೇಶ್ವರ ಕವಟಗಿ ಹಾಗೂ ಸಿಬ್ಬಂದಿಗಳಾದ ಎಂ.ಎಂ. ಅಯ್ಯನಗೌಡ್ರ, ಎಂ.ಬಿ. ಬಾರಡ್ಡಿ, ಎಂ.ಎಸ್. ದಿಡಗೂರ, ಹೆಚ್.ಐ. ದೇಪುರವಾಲಾ, ಪ್ರಸಾದ ಪಿರಿಮಳ, ಎಸ್.ವಿ. ಸೈನಾಪೂರ, ಎಂ.ಆರ್. ಹಿರೇಮಠ ಮತ್ತು ಇರ್ಫಾನ್ ಸೈಫಣ್ಣವರ ದಾಳಿಯಲ್ಲಿ ಪಾಲ್ಗೊಂಡಿದ್ದರು.

