ಪ್ರಕೃತಿ ವಿಕೋಪ ​ಕಣ್ಣೀರಿನಲ್ಲಿ ಮುಳುಗಿದ ರೈತಕುಲ

Samagraphrabha
2 Min Read

ಇಲ್ಲಿಯವರೆಗೆ ರೈತರ ಖಾತೆಗೆ ಜಮಾ ಆಗದ ಪರಿಹಾರ

​ನವಲಗುಂದ: ​ಈ ಹಿಂದೆ ಸುರಿದ ಹಾಗೂ ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮತ್ತು ಅಕಾಲಿಕ ಮಳೆಯಿಂದಾಗಿ ನವಲಗುಂದ ತಾಲೂಕಿನ ರೈತರ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದೆ. ತಾಲೂಕಿನಾದ್ಯಂತ ಸಾವಿರಾರು ಎಕರೆ ಹೊಲದಲ್ಲಿ ನೀರು ನಿಂತು, ಕಷ್ಟಪಟ್ಟು ಬೆಳೆದ ಬೆಳೆಗಳೆಲ್ಲವೂ ಕಣ್ಣೆದುರೇ ಕೊಳೆತು ಹೋಗುತ್ತಿವೆ. ಅಪಾರ ಹಣ, ಶ್ರಮ ಮತ್ತು ಭರವಸೆಯೊಂದಿಗೆ ಬಿತ್ತನೆ ಮಾಡಿದ ರೈತರ ಕನಸುಗಳೆಲ್ಲವೂ ನೆಲಕಚ್ಚಿವೆ.

ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ, ರೈತರು ಕಂಗಾಲಾಗಿದ್ದಾರೆ,
ಇದೇ ವರ್ಷದ ಮುಂಗಾರು ಹಂಗಾಮಿನಲ್ಲಿ ಆದ ಬೆಳೆ ನಷ್ಟಕ್ಕೇ ಇಲ್ಲಿಯವರೆಗೆ ಸರ್ಕಾರ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ,​ಸಾಲದ ಸುಳಿಯಲ್ಲಿ ಸಿಲುಕಿ ಅನ್ನದಾತರು ಒದ್ದಾಡುತ್ತಿದ್ದಾರೆ, ​ಕಳೆದ ವರ್ಷದ ಕೃಷಿ ವೈಫಲ್ಯದ ಸಾಲದ ಸುಳಿಯಿಂದ ಹೊರಬಾರದ ರೈತನಿಗೆ ಈ ಭಾರಿ ಪ್ರಕೃತಿ ವಿಕೋಪದಡಿ ಸುರಿದ ಮಳೆಯು ಮತ್ತೊಂದು ಅಘಾತ ನೀಡಿದೆ. ಈ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತ ಮತ್ತಷ್ಟು ಸಾಲಕ್ಕೆ ಸಿಲುಕಿ ಬದುಕಿನ ಅಂಚಿಗೆ ತಲುಪಿದ್ದಾನೆ. ಆರ್ಥಿಕವಾಗಿ ಮತ್ತು ಪ್ರಾಕೃತಿಕವಾಗಿ ಸಂಪೂರ್ಣ ಸೋಲನ್ನು ಅನುಭವಿಸುತ್ತಿರುವ ದೇಶದ ಬೆನ್ನೆಲುಬು ಇಂದು ಹತಾಶೆಯ ಗರಿಷ್ಟ ಸ್ಥಿತಿಯಲ್ಲಿದ್ದಾನೆ, ​ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತನಿಗೆ ಧೈರ್ಯ ತುಂಬುವ ಹಾಗೂ ಆತನಿಗೆ ಸೂಕ್ತ ಪರಿಹಾರ ಒದಗಿಸುವ ಸಂಪೂರ್ಣ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ, ತಕ್ಷಣವೇ ತಾಲೂಕಿನಾದ್ಯಂತ ಬೆಳೆ ಹಾನಿಯಾದ ರೈತ ಕುಟುಂಬಕ್ಕೆ
​ಸೂಕ್ತ ಪರಿಹಾರ ಒದಗಿಸಬೇಕು, ಸಾಲದ ಸುಳಿಯಲ್ಲಿ ಸಿಲುಕಿರುವಂತಹ ರೈತರಿಗೆ ಬ್ಯಾಂಕ್‌ಗಳಲ್ಲಿನ ಸಾಲ ಮರುಪಾವತಿಗೆ ವಿನಾಯಿತಿ ಮತ್ತು ಹೊಸ ಸಾಲ ಸೌಲಭ್ಯಗಳನ್ನು ಒದಗಿಸಿ, ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು, ಅಂದಾಗಲೇ ಅನ್ನ ಹಾಕುವಂತಹ ಅನ್ನದಾತರನ್ನು ಉಳಿಸಿಕೊಳ್ಳಲಿಕ್ಕೆ ಸಾಧ್ಯ..

ಬಂಡಾಯ ನಾಡಿನ ರೈತರ ನೋವಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಸರ್ಕಾರದಿಂದ ಈ ಕುರಿತು ಯಾವುದೇ ಸ್ಪಷ್ಟ ಮತ್ತು ತ್ವರಿತ ಕ್ರಮ ಕೈಗೊಳ್ಳದಿದ್ದಲ್ಲಿ, ತಾಲೂಕಿನ ರೈತರ ಪರವಾಗಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮತ್ತು ಪ್ರತಿಭಟನೆಗೆ ಇಳಿಯಲು ಸಿದ್ಧರಾಗಬೇಕಾಗುತ್ತದೆ, ರೈತರ ತಾಳ್ಮೆ ಕಟ್ಟೆಯೊಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು, ಅನ್ನದಾತನಿಗೆ ಬೆಳೆಹಾನಿ ಪರಿಹಾರ ಅವರ ಬ್ಯಾಂಕ ಖಾತೆಗೆ ಜಮಾ ಮಾಡಬೇಕು.

- Advertisement -
Ad image

ಮಾಬುಸಾಬ ಯರಗುಪ್ಪಿ
ಸಾಮಾಜಿಕ ಕಾರ್ಯಕರ್ತ, ನವಲಗುಂದ

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸರ್ಕಾರಗಳು ರೈತನಿಗೆ ಆಸರೆಯಾಗಬೇಕು. ಆದರೆ, ಇಲ್ಲಿ ಸಮರೋಪಾದಿಯ ಸಮೀಕ್ಷೆ ನಡೆಯುತ್ತಿಲ್ಲ. ಕೇವಲ ಕಾಗದದಲ್ಲಿ ಪರಿಹಾರ ಕೊಡುವ ಬದಲು, ರೈತರ ಖಾತೆಗೆ ತಕ್ಷಣ ಮತ್ತು ಸೂಕ್ತ ಬೆಳೆಹಾನಿ ಪರಿಹಾರ ಜಮಾ ಆಗಬೇಕು. ಅನ್ನ ನೀಡುವವನ ಕಣ್ಣೀರು ಒರೆಸದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ.

ಮಲ್ಲಿಕಾರ್ಜುನಸ್ವಾಮಿ ಮಠಪತಿ
ರೈತ ಮುಖಂಡರು, ಗೊಬ್ಬರಗುಂಪಿ

ಪ್ರತಿ ರೈತನೂ ಒಂದು ಜೀವ. ಕೇವಲ ಹಣಕಾಸಿನ ನೆರವಿನ ಜೊತೆಗೆ, ಸರ್ಕಾರ ಸಾಲದ ಹೊರೆ ಇಳಿಸುವ ಮತ್ತು ಮಾನಸಿಕ ಧೈರ್ಯ ತುಂಬುವ ಕಾರ್ಯಕ್ರಮಗಳನ್ನು ತಕ್ಷಣವೇ ಹಮ್ಮಿಕೊಳ್ಳಬೇಕು. ರೈತರು ಆತ್ಮಹತ್ಯೆಯಂತಹ ತೀರ್ಮಾನಕ್ಕೆ ಬರದಂತೆ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಅವರ ಬಳಿ ಹೋಗಿ ಮಾತನಾಡಬೇಕು. ಸರ್ಕಾರ ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ಸಮಸ್ಯೆಯ ಮೂಲಕ್ಕೆ ಸ್ಪಂದಿಸಬೇಕು..

ಸಿರಾಜುದ್ದಿನ ಧಾರವಾಡ
ಅಧ್ಯಕ್ಷರು, ಕರವೇ
ನವಲಗುಂದ ವಿಧಾನಸಭಾ ಕ್ಷೇತ್ರ..

Share this Article