ನವಲಗುಂದ: ಈಗಾಗಲೇ ಆರಂಭವಾಗಿರುವ ಮಳೆಯ ಅಬ್ಬರಕ್ಕೆ ನವಲಗುಂದ ನಗರವು ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ನಗರದ ರಸ್ತೆಗಳನ್ನು ನೋಡಿದರೆ, ಇದು ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವೋ ಅಥವಾ ಹಳ್ಳಿಯ ಕಚ್ಚಾರಸ್ತೆಯೋ ಎಂಬ ಪ್ರಶ್ನೆ ಮೂಡುತ್ತದೆ. ಮುಖ್ಯ ರಸ್ತೆಗಳಲ್ಲಿ ತಗ್ಗು-ಗುಂಡಿಗಳದ್ದೇ ದರ್ಬಾರು. ಈ ಗುಂಡಿಗಳು ಮಳೆ ನೀರಿನಿಂದ ತುಂಬಿ, ಮೃತ್ಯು ಕೂಪಗಳಂತೆ ಮಾರ್ಪಟ್ಟಿದ್ದು, ನಾಗರಿಕರು ನಿತ್ಯವೂ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ದುಃಸ್ಥಿತಿ ಎದುರಾಗಿದೆ.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ರಸ್ತೆಗಳ ಮೇಲೆ ಗುಂಡಿಗಳು ಬೃಹದಾಕಾರವಾಗಿ ಬಿದ್ದಿವೆ. ಮಳೆ ನೀರು ಅವುಗಳಲ್ಲಿ ನಿಂತಾಗ, ಅವು ಎಷ್ಟು ಆಳವಾಗಿವೆ, ಎಷ್ಟೆಷ್ಟು ದೊಡ್ಡದಾಗಿವೆ ಎಂದು ಊಹಿಸಲೂ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ, ಪ್ರತಿದಿನವೂ ಒಂದಲ್ಲ ಒಂದು ಕಡೆ ಅಪಘಾತಗಳು ಸಂಭವಿಸುತ್ತಲೇ ಇವೆ.
ವಿಶೇಷವಾಗಿ ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ರಸ್ತೆಯಲ್ಲಿನ ನೀರು ಮತ್ತು ಗುಂಡಿಗಳ ವ್ಯತ್ಯಾಸ ತಿಳಿಯದೆ ಬೈಕ್ನೊಂದಿಗೆ ಗುಂಡಿಗೆ ಇಳಿಯುವ ಸನ್ನಿವೇಶಗಳು ಸಾಮಾನ್ಯವಾಗಿದೆ. ನಿಯಂತ್ರಣ ಕಳೆದುಕೊಂಡು ಬಿದ್ದು, ಗಾಯ ಮಾಡಿಕೊಳ್ಳುವುದು, ವಾಹನಗಳಿಗೆ ಹಾನಿಯಾಗುವುದು ನಿರಂತರವಾಗಿದೆ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಆಟೋ ಅಥವಾ ಬಸ್ಸುಗಳಲ್ಲೂ ಸಹ ಪ್ರಯಾಣ ಮಾಡಲು ಭಯ ಪಡುವಂತಾಗಿದೆ.
ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ತುರ್ತು ಸಂದರ್ಭಗಳಲ್ಲಿ ಕೂಡ ಈ ಗುಂಡಿಗಳು ದೊಡ್ಡ ಅಡ್ಡಿಯಾಗಿ ಪರಿಣಮಿಸುತ್ತವೆ.
ರಸ್ತೆಯ ಅಸಮರ್ಪಕ ಕಾಮಗಾರಿಗಳೇ ಇದಕ್ಕೆ ಮೂಲ ಕಾರಣ! ಕಳಪೆ ಗುಣಮಟ್ಟದ ಕಾಮಗಾರಿಗಳಿಂದಾಗಿ ಮಳೆಗಾಲ ಬಂದಾಗಲೆಲ್ಲಾ ರಸ್ತೆಗಳು ಕರಗಿ ಹೋಗಿ ಗುಂಡಿಗಳು ಸೃಷ್ಟಿಯಾಗುತ್ತಿವೆ. ಈ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚುವ ಬದಲು, ತಾತ್ಕಾಲಿಕವಾಗಿ ಮುಚ್ಚುವ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಮನೋಭಾವವೇ ನಾಗರಿಕರ ಈ ಸಂಕಷ್ಟಕ್ಕೆ ನೇರ ಹೊಣೆಯಾಗಿದೆ.
‘ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಬರುವ ಜನಪ್ರತಿನಿಧಿಗಳು ನಮ್ಮ ಕಷ್ಟವನ್ನು ಅರಿಯುವುದಾದರೂ ಹೇಗೆ?’ ಎಂದು ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಅರಿತಿದ್ದರೂ, ತುರ್ತು ಕ್ರಮಗಳನ್ನು ಕೈಗೊಳ್ಳದಿರುವುದು ನಾಗರಿಕರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ, ಇನ್ನಾದರೂ ಎಚ್ಚೆತ್ತುಕೊಂಡು ತುರ್ತಾಗಿ ಈ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕಿದೆ. ಹುಬ್ಬಳ್ಳಿ ಸೊಲ್ಲಾಪುರ ಸೇರಿದಂತೆ ನ್ಯಾಷನಲ್ ಹೈವೇಗಳಲ್ಲಿ ಬಿದ್ದಿರುವಂತಹ ಗುಂಡಿಗಳನ್ನು ಗುರುತಿಸಿ, ತಾತ್ಕಾಲಿಕವಾಗಿ ದುರಸ್ಥಿ ಮಾಡಿಸಬೇಕು,
ಇಲ್ಲವಾದಲ್ಲಿ ಈ ಕಳಪೆ ರಸ್ತೆಗಳಿಂದಾಗಿ ಸಂಭವಿಸುವ ಪ್ರತಿ ಅಪಘಾತಕ್ಕೂ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರಾಗಬೇಕಾಗುತ್ತದೆ.
ಮಳೆಗಾಲ ಮುಗಿಯುವವರೆಗೆ, ವಾಹನ ಸವಾರರ ಸುರಕ್ಷತೆಗಾಗಿ ಗುಂಡಿಗಳಿಗೆ ಜಲ್ಲಿಕಲ್ಲು ಅಥವಾ ಸಿಮೆಂಟ್ ಮಿಶ್ರಣದಿಂದ ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡಬೇಕು, ಮಳೆಗಾಲದ ನಂತರ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು, ಕಳಪೆ ಕಾಮಗಾರಿಗೆ ಆಸ್ಪದವಿಲ್ಲದೆ ಶಾಶ್ವತವಾದ ರಸ್ತೆ ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪಿಸಿ, ಹಿಂದಿನ ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು, ನಮ್ಮ ತೆರಿಗೆ ಹಣಕ್ಕೆ ಪ್ರತಿಯಾಗಿ ಸುರಕ್ಷಿತ ರಸ್ತೆಗಳನ್ನು ಪಡೆಯುವುದು ನಮ್ಮ ಹಕ್ಕು…
ಮಾಬುಸಾಬ ಯರಗುಪ್ಪಿ
ಸಾಮಾಜಿಕ ಕಾರ್ಯಕರ್ತ, ನವಲಗುಂದ
ಈ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಟೆಂಡರ ಪ್ರಕ್ರಿಯೆ ಆರಂಭವಾಗಿದೆ, ಮುಂದಿನ ವಾರದಲ್ಲಿ ವರ್ಕ್ ಆರ್ಡರ ಕೊಡುತ್ತೇವೆ ಕೊಟ್ಟ ನಂತರ ಅತೀ ಶೀಘ್ರದಲ್ಲಿಯೇ ಕೆಲಸ ಪ್ರಾರಂಭವಾಗುತ್ತೆ.
* ಸೋಮನಗೌಡ ಪಾಟೀಲ್
ಎ.ಇ.ಇ, ಲೋಕೋಪಯೋಗಿ ಇಲಾಖೆ, ನವಲಗುಂದ
ರಸ್ತೆ ಗುಂಡಿಗಳು ಬಿದ್ದಿರುವುದು ನಮ್ಮ ಗಮನಕ್ಕೆ ಬಂದಿದೆ, ಮಳೆ ನಿಂತ ಮೇಲೆ ಕಾಮಗಾರಿ ಆರಂಭಿಸಿ ಡಾಂಬರ ಹಾಕಿ ಶಾಶ್ವತವಾಗಿ ರಸ್ತೆ ದುರಸ್ಥಿ ಮಾಡಿಸುತ್ತೇನೆ..
* ಸತೀಶ ನಾಗನೂರ
ಎ.ಇ.ಇ, ಎನ್.ಎಚ್ ಸಬ್ ಡಿವಿಜನ ಹುಬ್ಬಳ್ಳಿ
ಈ ಹೈವೇ ರಸ್ತೆಯಲ್ಲಿ ಬಿದ್ದಿರುವಂತಹ
ತಗ್ಗು-ಗುಂಡಿಗಳಲ್ಲಿ ಬಿದ್ದು ಸಾಕಷ್ಟು ವಾಹನ ಸವಾರರು ಗಾಯಗೊಂಡಿದ್ದಾರೆ, ಆ ತೆಗ್ಗು ಗುಂಡಿಯಲ್ಲಿ ಮಳೆಯ ನೀರು ತುಂಬಿ ಅವು ಕಾಣಿಸುವುದಿಲ್ಲ, ಈ ದುಃಸ್ಥಿತಿಗೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.
ಈ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ಇದ್ದರು, ತುರ್ತು ಕ್ರಮಗಳನ್ನು ಕೈಗೊಳ್ಳದಿರುವುದು ನಾಗರಿಕರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ತುರ್ತಾಗಿ ಈ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕಿದೆ..
* ಸಿರಾಜುದ್ದೀನ ಧಾರವಾಡ
ಅಧ್ಯಕ್ಷರು, ಕ.ರ.ವೇ
ನವಲಗುಂದ

