ಗದಗ : ರಸ್ತೆ ದಾಟುವಾಗ ಪೊಲೀಸ್ ಜೀಪ್ ಗೆ ಕತ್ತೆಕಿರುಬವೊಂದು ಅಡ್ಡ ಬಂದು ಚಕ್ರದಲ್ಲಿ ಸಿಲುಕಿದ ಪರಿಣಾಮವಾಗಿ ಕತ್ತೆ ಕಿರುಬ ಸಾವನ್ನಪ್ಪಿದ್ದಲ್ಲದೆ, ಪೊಲೀಸ್ ಜೀಪ್ ನಲ್ಲಿದ್ದ ಬೆಟಗೇರಿ ಠಾಣಾ ಎಎಸ್ಐ ಗಂಭೀರವಾಗಿ ಗಾಯಗೊಂಡ ಘಟನೆ ಗದಗ ತಾಲೂಕಿನ ಸೊರಟೂರು ಗ್ರಾಮದ ಬಳಿ ಮುಂಜಾನೆ ನಡೆದಿದೆ.
ಬೆಟಗೇರಿ ಠಾಣೆ ಎಎಸ್ಐ ಕಾಶಿಮ್ ಸಾಬ್ ಹರಿವಾಣ ಗಂಭೀರವಾಗಿ ಗಾಯ ಗಳಾಗಿದ್ದು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೀಪ್ ನಲ್ಲಿದ್ದ ವೈರ್ ಲೆಸ್ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ ಗೌಡ, ಚಾಲಕ ಓಂ ನಾಥ್ ಗೆ ಗದಗ ಜಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಲಕ್ಷ್ಮೇಶ್ವರ ಗಣಪತಿ ವಿಸರ್ಜನೆ ಬಂದೋಬಸ್ತ್ ಮುಗಿಸಿಕೊಂಡು ಬೆಳಗಿನ ಜಾವ ಶಿರಹಟ್ಟಿ ಮಾರ್ಗವಾಗಿ ಗದಗ ಕಡೆ ಬರುತ್ತಿರುವಾಗ ಸೊರಟೂರು ಬಳಿ ಈ ಘಟನೆ ನಡೆದಿದ್ದು, ಪೊಲೀಸ್ ಜೀಪ್ ಗೆ ಕತ್ತೆ ಕಿರುಬ ಅಡ್ಡ ಬಂದ ನಂತರ ಗೂಡ್ಸ್ ವಾಹನಕ್ಕೂ ಜೀಪ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

