ಗದಗ : ಮಾದಕ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರು ಹೆಚ್ಚಿನ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುವ ಅಗತ್ಯತೆ ಇದ್ದು, ತಮ್ಮ ಕುಟುಂಬಗಳ ಸದಸ್ಯರಿಗೆ ಮತ್ತು ಸಮುದಾಯದಲ್ಲಿ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸಿ ಅವುಗಳ ಸೇವನೆಯನ್ನು ತಡೆಗಟ್ಟುವಲ್ಲಿ ಮಹಿಳೆಯರು ಹೆಚ್ಚು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ ವರು ಕರೆ ನೀಡಿದರು.
“ಮಾದಕ ಮುಕ್ತ ಕರ್ನಾಟಕ ಅಭಿಯಾನ”ದ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜರುಗಿದ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಸಂಜೀವಿನಿ-ಡೇ-ಎನ್ಆರ್ಎಲ್ಎಮ್ ಯೋಜನೆಯಡಿ ಸಂಘಟಿತಗೊಂಡಿರುವ ಸ್ವ-ಸಹಾಯ ಗುಂಪಿನ ಮಹಿಳೆಯರು ಮತ್ತು ಒಕ್ಕೂಟಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಮತ್ತು ತಾವು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತಗೊಳ್ಳದೇ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಮಾದಕ ಮುಕ್ತ ಕರ್ನಾಟಕ ಅಭಿಯಾನದ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನಾ ನಿರ್ದೇಶಕರಾದ ಎಮ್.ವಿ ಚಳಗೇರಿಯವರು “ಮಾದಕ ವಸ್ತುಗಳ ಸೇವನೆಯು ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೇ ಗ್ರಾಮೀಣ ಪ್ರದೇಶಗಳಿಗೂ ತನ್ನ ಬಾಹುಗಳನ್ನು ಚಾಚಿದ್ದು, ವಿಶೇಷವಾಗಿ ಯುವ ಜನಾಂಗ ಈ ಕುರಿತು ಹೆಚ್ಚು ಜಾಗೃತಿ ವಹಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳು ಹಾಗೂ ಸಮುದಾಯದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಅವುಗಳಿಂದಾಗುವ ದುಷ್ಪರಿಣಾಮಗಳ ಕುರಿತು ದಿನಾಂಕ 01.08.2025 ರಿಂದ 30.09.2025ರ ವರೆಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದಿನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಒಕ್ಕೂಟಗಳ ಅಧ್ಯಕ್ಷರು ತಾವು ಮಾಹಿತಿ ಪಡೆದುಕೊಂಡು ಸಮದಾಯದಲ್ಲಿ ಜಾಗೃತಿ ಮೂಡಿಸಿ ಈ ಮೂಲಕ ಬದಲಾವಣೆಯ ರೂವಾರಿಗಳಾಗಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗದಗನ ಕೆ.ಎಚ್ ಪಾಟೀಲ ವೈದ್ಯಕೀಯ ವಿಜಾನಗಳ ಸಂಸ್ಥೆಯ ಮನೋವೈದ್ಯಕೀಯ ಪ್ರಾದ್ಯಾಪಕರು ಹಾಗೂ ಉಪ-ವೈದ್ಯಕೀಯ ಅಧೀಕ್ಷಕರಾದ ಡಾ|| ಸೋಮಶೇಖರ ಬಿಜ್ಜಳರವರು ಮಾದಕ ವಸ್ತುಗಳ ಸೇವನೆ, ವಿಧಗಳು ಮತ್ತು ಇವುಗಳನ್ನು ತಡೆಗಟ್ಟುವಲ್ಲಿ ಮಹಿಳೆಯರು ಕುಟುಂಬದಲ್ಲಿ ಮತ್ತು ಸಮಾದಜಲ್ಲಿ ವಹಿಸಬೇಕಾಗಿರುವ ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದರು. ನಂತರ ಸಹಾಯಕ ಪ್ರಾದ್ಯಾಪಕರಾದ ಡಾ|| ಅರವಿಂದ ಕರಿನಾಗಣ್ಣನವರ್ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ-ಡೇ-ಎನ್ಆರ್ಎಲ್ಎಮ್ ಯೋಜನೆಯಡಿ ಸ್ಥಾಪಿಸಲಾದ ಒಕ್ಕೂಟಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸ್ವ-ಸಹಾಯ ಗುಂಪಿನ ಸದಸ್ಯರು, ನಗರದ ಜೆ.ಟಿ ಕಾಲೇಜಿನ ಎನ್ಎಸ್ಎಸ್ ಮತ್ತು ಎನ್ಸಿಸಿ ವಿಭಾಗದ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಹಾಗೂ ಯೋಜನೆಯ ಸಿಬ್ಬಂದಿಗಳು ಭಾಗವಹಿಸಿದ್ಧರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತನ ಉಪಕಾರ್ಯದರ್ಶಿಗಳಾದ ಸಿ.ಎನ್. ಮುಂಡರಗಿ, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ|| ಎಸ್ಎಸ್ ನೀಲಗುಂದ ಭಾಗವಹಿಸಿದ್ದರು. ಜಿಲ್ಲಾ ಪಂಚಾಯತನ ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ಸಂಯೋಜಕ ಕೂಸಣ್ಣನವರ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ ಬಸವರಾಜ ಮೂಲಿಮನಿ ವಂದಿಸಿದರು.
ಮಾದಕ ಮುಕ್ತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದು: ಜಿಲ್ಲಾದಿಕಾರಿ ಸಿ.ಎನ್. ಶ್ರೀಧರ
