ನವಲಗುಂದ ತಾಲೂಕಿನ ಸುತ್ತಲೂ ಗ್ರಾಮೀಣ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ರೈತರ ಜಮೀನುಗಳಿಗೆ ಶನಿವಾರ ಭೇಟಿ ನೀಡಿದ ಸಚಿವ ಸಂತೋಷ ಲಾಡ್ ಅವರು ಪರಿಶೀಲನೆ ನಡೆಸಿ, ರೈತರ ಅಹವಾಲು ಆಲಿಸಿದರು.
ನವಲಗುಂದ ತಾಲ್ಲೂಕಿನ ನಾಯಕನೂರ, ತಡಹಾಳ, ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ನಡೆಸಿದರು.
ಭಾರಿ ಮಳೆಗೆ ಹಳಾದ ಹೆಸರು ಬೇಳೆ, ಉಳ್ಳಾಗಡ್ಡಿ, ಮೆಕ್ಕೆಜೋಳ, ಸೋಯಾಬಿನ್, ಹತ್ತಿ ಬೆಳೆಗಳ ಪರಿಶೀಲನೆ ನಡೆಸಿದರು. ನಾಯಕನೂರ ಗ್ರಾಮದಲ್ಲಿ ಹಾಳಾದ ಹೆಸರು ,ಉಳ್ಳಾಗಡ್ಡಿ, ಶೇಂಗಾ, ಸೋಯಾಬಿನ್ ಬೆಳೆಗಳನ್ನು ವೀಕ್ಷಿಸಿದರು. ತಾವೇ ಖುದ್ದಾಗಿ ಹೊಲಗದ್ದೆಗಳಲ್ಲಿ ಉಳ್ಳಾಗಡ್ಡಿ ಬೆಳೆ ಕಿತ್ತು ಸ್ಥಳದಲ್ಲಿ ಮಣ್ಣು ತುಂಬಿಕೊಂಡಿರುವ ಜಮೀನುಗಳನ್ನು ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದರು.
ಬೆಳೆ ಪರಿಹಾರ ನೀಡುವಲ್ಲಿ ಸರ್ಕಾರದ ಮಾನದಂಡಗಳನ್ನು ಸಡಿಲಿಸಬೇಕು. ರೈತರ ಬೆಳೆ ಎಷ್ಟು ಎಕರೆಯಲ್ಲಿ ಹಾನಿಯಾಗಿದೆ ಅಷ್ಟು ಭೂಮಿಗೂ ಪರಿಹಾರ ಒದಗಿಸಬೇಕು. ಮಳೆಯಿಂದ ಬೆಳೆಯ ಮೇಲೆ ಮಣ್ಣು ತುಂಬಿಕೊಂಡು ಹಾನಿಯಾಗಿದೆ. ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಪಕ್ಕದ ಜಮೀನಿನಲ್ಲಿ ಬೆಳೆಗಳು ಅಪಾರ ಪ್ರಮಾಣದಲ್ಲಿ ನೀರಿನ ವಿಪರೀತ ಅಂಶದಿಂದ ನಷ್ಟವಾಗಿವೆ. ಇದಕ್ಕೂ ಪರಿಹಾರ ನೀಡಬೇಕು. ಇಲ್ಲವಾದರೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ರೈತರು ಮನವಿ ಮಾಡಿಕೊಂಡರು.
ಸಚಿವರ ಭರವಸೆ:
ರೈತರ ಮನವಿಗೆ ಸ್ಪಂದಿಸಿದ ಸಚಿವ ಸಂತೋಷ ಲಾಡ್ ತಾಲ್ಲೂಕಿನಾದ್ಯಂತ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಕೃಷಿ ಪ್ರದೇಶಗಳ ಬೆಲೆ ನಾಶವಾಗಿದೆ. ಇದಕ್ಕೆ ಪರಿಹಾರ ನೀಡುವ ಕುರಿತು ಈಗಾಗಲೇ ಜಿಲ್ಲಾಧಿಕಾರಿ, ಶಾಸಕರ ಜೊತೆ ಚರ್ಚಿಸಿದ್ದು ರೈತರು 50 ಸಾವಿರ ಬೆಳೆ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ. ಸರ್ಕಾರದ ನಿಯಮಾವಳಿಗಳಿಗೆ ತಕ್ಕ ಬೆಳೆ ಪರಿಹಾರ ನೀಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬೆಳೆ ವಿಮೆ ಕುರಿತು ಒಂದು ವಾರದಲ್ಲಿ ಸಭೆ ನಡೆಸಿ ಬೆಳೆ ವಿಮೆ ರೈತರಿಗೆ ತಲುಪಲು ಕಾರ್ಯ ಮಾಡಲಾಗುವುದು ಎಂದ ಅವರು ಈ ವೇಳೆ ನಿರಂತರ ಸುರಿದ ಮಳೆಗೆ ಮನೆ ಕಳೆದುಕೊಂಡವರಿಗೆ ಸಚಿವರು ವಯಕ್ತಿಕವಾಗಿ ತಲಾ 25 ಸಾವಿರ ರೂಪಾಯಿ ಪರಿಹಾರ ನೀಡಿದರು .
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಶಾಸಕ ಏನ್ ಹೆಚ್ ಕೋನರಡ್ಡಿ, ತಹಸೀಲ್ದಾರ ಸುಧೀರ ಸಾವಕಾರ, ಸೇರಿದಂತೆ ವಿವಿಧ ಇಲಾಖೆಯ ಎಲ್ಲ ಅಧಿಕಾರಿ ವರ್ಗದವರು ಇದ್ದರು.

