ನಾಯಿ ಕಡಿಸಿಕೊಂಡು ಸಾಮಾನ್ಯ ಸಭೆಗೆ ಬಂದ ಶಾಲಾ ವಿದ್ಯಾರ್ಥಿ

Samagraphrabha
2 Min Read

ರೋಣ ಪುರಸಭೆ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ * ಮುಖ್ಯಾಧಿಕಾರಿಯತ್ತ ಸದಸ್ಯರ ಬೊಟ್ಟು

ರೋಣ: ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಕೂಡಲೇ ಅವುಗಳನ್ನು ನಿಯಂತ್ರಿಸಬೇಕು ಎಂದು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ ನಾಯಿ ಕಡಿಸಿಕೊಂಡವರು ನೇರವಾಗಿ ಸಾಮಾನ್ಯ ಸಭೆಗೆ ಆಗಮಿಸಿದ ಘಟನೆ ಮಂಗಳವಾರ ನಡೆಯಿತು.
ಇಲ್ಲಿಯ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷೆ ಬಸಮ್ಮ ಕೊಪ್ಪದ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ಘಟನೆ ನಡೆಯಿತು.
ಸಮಾಜ ಕಲ್ಯಾಣ ಇಲಾಖೆ ಹಿಂಬದಿಯ ವಸತಿ ನಿಲಯದಲ್ಲಿ ನಾಯಿ ಕಡಿತದಿಂದ ಏಳು ಜನರು ಗಾಯಗೊಂಡಿದ್ದಾರೆ. ನಾಯಿಯನ್ನು ಸೆರೆಹಿಡಿಯುವಂತೆ ಮೂರು ಬಾರಿ ಮನವಿ ಕೊಟ್ಟರೂ ಮುಖ್ಯಾಧಿಕಾರಿ ಕ್ಯಾರೇ ಎನ್ನುತ್ತಿಲ್ಲ ಎಂದು ದೂರುದಾರರು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯರು ಏನ್ರೀ ಮುಖ್ಯಾಧಿಕಾರಿಗಳೇ ಇದಕ್ಕೆ ಏನು ಹೇಳಿವಿರಿ ಎಂದು ಪ್ರಶ್ನಿಸಿದರು. ನಾಳೆಯೇ ನಾಯಿ ಸೆರೆ ಹಿಡಿಯಲಾಗುವುದು ಎಂದು ತಿಳಿಸಿದರು. ಇದರಿಂದ ಸಿಟ್ಟಿಗೆದ್ದ ಸದಸ್ಯರು ಈ ಕೂಡಲೇ ನಾಯಿ ಸೆರೆಗೆ ಕ್ರಮ ವಹಿಸಿ ಎಂದು ಸೂಚಿಸಿದರು.
ಇದಕ್ಕೂ ಮುನ್ನ ಮುಖ್ಯಾಧಿಕಾರಿ ಆರ್.ಎ. ಹೊಸಮನಿ ಸಾಮಾನ್ಯ ಸಭೆಯ ನಡಾವಳಿ ಓದುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸದಸ್ಯ ಸಂತೋಷ ಕಡಿವಾಲ, ರೋಣ ಪುರಸಭೆಯ ಹೊರವಲಯದಲ್ಲಿ ಸ್ವಾಗತ ಕಮಾನು ನಿರ್ಮಿಸಲು ಕಳೆದ ಸಲದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿತ್ತು. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದರು. ಇದಕ್ಕು ತತ್ತರಿಸಿದ ಮುಖ್ಯಾಧಿಕಾರಿ ಶೀಘ್ರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.
ಗದಿಗೆಪ್ಪ ಕಿರೇಸೂರ ಮಾತನಾಡಿ, ೫ ವರ್ಷದಿಂದ ಕುಡಿಯುವ ನೀರಿನ ಪೈಪ್‌ಗೆ ಗಟಾರ್ ನೀರು ಸೇರ್ಪಡೆಯಾಗುತ್ತಿದೆ. ಮಳೆ ಬಂದರೆ ಅನಾಹುತಗಳ ಸರಮಾಲೆಯೇ ನಡೆಯುತ್ತವೆ. ನೀರಿನ ಪೈಪ್‌ಗಳನ್ನು ದುರಸ್ತಿ ಮಾಡಿಸಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.
ಕೆರೆಯ ಜಾಗವನ್ನು ಸ್ವಚ್ಛಗೊಳಿಸಿ ಅಲ್ಲಿ ತರಕಾರಿ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಮಲ್ಲಯ್ಯ ಮಹಾಪುರುಷಮಠ ಸಲಹೆ ನೀಡಿದರು.
ಲೋಕೋಪಯೋಗಿ ಕಚೇರಿಗೆ ಹೊಂದಿಕೊAಡು ಇರುವ ಇಂದಿರಾ ಕ್ಯಾಂಟೀನ್‌ಗೆ ಕಾಪೌಂಡ್ ನಿರ್ಮಿಸುವಂತೆ ಸಭೆಯಲ್ಲಿ ಸಲಹೆಗಳು ಕೇಳಿ ಬಂದವು.
ಪಟ್ಟಣದಲ್ಲಿನ ಸ್ಮಶಾನ ಸ್ವಚ್ಛತೆ ಮರಿಚೀಕೆಯಾಗಿದೆ. ಶವ ತೆಗೆದುಕೊಂಡು ಹೋಗಲು ಸರಿಯಾದ ರಸ್ತೆ ಇಲ್ಲ. ಅಧಿಕಾರಿಗಳು ಮುತುವರ್ಜಿವಹಿಸಿ ಕೆಲಸ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಸರ್ವ ಸದಸ್ಯರು ಒಕ್ಕೂರಲಿನಿಂದ ಧ್ವನಿಗೂಡಿಸಿದರು.
೩ನೇ ವಾರ್ಡ್ ಸದಸ್ಯೆ ಶಕುಂತಲಾ ದೇಶಣ್ಣವರ ಮಾತನಾಡಿ, ಮುಖ್ಯಾಧಿಕಾರಿಗಳೇ ನಮ್ಮ ವಾರ್ಡ್ಗೆ ಒಂದು ದಿನವಾದರೂ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಿದ್ದೀರಾ ಎಂದು ಪ್ರಶ್ನಿಸಿದರು. ನಮ್ಮ ವಾರ್ಡ್ನಲ್ಲಿ ನಾಲ್ಕೈದು ತಿಂಗಳಿಂದ ಬೀದಿ ದೀಪಗಳು ಬೆಳಗದೆ ಕತ್ತಲಲ್ಲಿ ಕಾಳ ಕಳೆಯುತ್ತಿದ್ದೇವೆ. ಶೌಚಾಲಯ, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಹನುಮಂತ ತಳ್ಳಿಕೇರಿ, ಸದಸ್ಯರಾದ ಮಿಥುನ್ ಪಾಟೀಲ, ಬಾವಾಸಾಬ್ ಬೆಟಗೇರಿ, ದುರಗಪ್ಪ ಹಿರೇಮನಿ, ಶಕುಂತಲಾ ಚಿತ್ರಗಾರ, ಸಂಗಪ್ಪ ಜಿಡ್ಡಿಬಾಗಿಲ, ಮತ್ತಿತರರು ಇದ್ದರು.

ಫೋಟೋ
ರೋಣ ಪುರಸಭೆ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ನಾಯಿ ಕಡಿದು ಗಾಯಗೊಂಡವರು ನೇರವಾಗಿ ಸಾಮಾನ್ಯ ಸಭೆಗೆ ಬಂದು ಸಮಸ್ಯೆ ಹೇಳಿಕೊಂಡರು.

Share this Article