ಎನ್ ಪಿ ಕೆ ಆಗ್ರೋ ಕೇಂದ್ರದ ಮೇಲೆ ತಹಶೀಲ್ದಾರ್ ಹಾಗೂ ಕೃಷಿ ಅಧಿಕಾರಿಗಳ ದಾಳಿ

Samagraphrabha
1 Min Read

ಮುಂಡರಗಿ: ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ರೈತರಿಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಪಟ್ಟಣದ ಎನ್.ಪಿ.ಕೆ. ಆಗ್ರೋ ಕೇಂದ್ರದ ಮೇಲೆ ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಹಾಗೂ ಕೃಷಿ ಅಧಿಕಾರಿಗಳು ದಾಳಿ ನಡೆಸಿದರು. ನಿಯಮಾನುಸಾರ ಮಳಿಗೆಯಲ್ಲಿ ರಸಗೊಬ್ಬರ ಮಾರಾಟ ಮಾಡದಿರುವುದು ಕಂಡುಬಂದದ್ದರಿಂದ ಎನ್.ಪಿ.ಕೆ ಆಗ್ರೋ ಕೇಂದ್ರದ ಮಾರಾಟ ಪರವಾನಿಗೆಯನ್ನು 15 ದಿನಗಳವರೆಗೆ ಅಮಾನತ್ತಿನಲ್ಲಿಟ್ಟರು.
ನಿಯಮಾನುಸಾರ ಎಲ್ಲ ಕೃಷಿ ಪರಿಕರ ಮಾರಾಟಗಾರರು ಯೂರಿಯಾ ರಸಗೊಬ್ಬರವನ್ನು ರೈತರ ಹೆಬ್ಬಟ್ಟು ಅಥವಾ ಅವರ ಪೋನಿಗೆ ಬರುವ ಓಟಿಪಿಯನ್ನು ಖಚಿತಪಡಿಸಿಕೊಂಡು ರಸಗೊಬ್ಬರ ಮಾರಾಟ ಮಾಡಬೇಕು. ಎನ.ಪಿ.ಕೆ. ಆಗ್ರೋ ಕೇಂದ್ರದವರು ಅದನ್ನು ಪಾಲಿಸದೆ ತಮಗೆ ಬೇಕಾದವರಿಗೆ ಗೊಬ್ಬರ ನೀಡಿದ್ದರಿಂದ ಅವರ ಮಾರಾಟವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡಲಾಗಿದೆ ಎಂದು ತಿಳಿದುಬಂದಿದೆ.
ಆಗ್ರೋ ಕೇಂದ್ರದವರು ನಗದಿ ಪಡಿಸಿದ ನಮೂನೆಯಲ್ಲಿ ನಗದು ಅಥವಾ ಸಾಲದ ಬಿಲ್ಲನ್ನು ರೈತರಿಗೆ ನೀಡಲು ನಿರಾಕರಿಸುತ್ತಿದ್ದರು. ರಸಗೊಬ್ಬರ, ನಿರವಯವ, ಸಾವಯವ ಅಥವಾ ಮಿಶ್ರಿತ ಗೊಬ್ಬರ ಮಾರಾಟ ನಿಯಂತ್ರಣ ಆದೇಶ 1985ಅನ್ನು ಉಲ್ಲಂಘನೆ ಮಾಡಿರುವುದು ದಾಳಿಯ ಸಂದರ್ಭದಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರಾಟ ಮಳಿಗೆಯಲ್ಲಿ ಲಭ್ಯವಿರುವ ರಸಗೊಬ್ಬರ ದಾಸ್ತಾನಿಗೂ ಹಾಗೂ ಪಿ.ಓ.ಎಸ್. ಯಂತ್ರದಲ್ಲಿರುವ ರಸಗೊಬ್ಬರ ದಾಸ್ತಾನಿಗೂ ವ್ಯತ್ಯಾಸ ಕಂಡುಬಂದಿದೆ. ರಸಗೊಬ್ಬರಗಳ ನಿಗದಿತ ದರವನ್ನು ಮಳೆಗೆಯಲ್ಲಿ ಪ್ರದರ್ಶಿಸಿಸಿರುವುದಿಲ್ಲ. ನಿಗದಿಪಡಿಸಿದ ನಮೂನೆಯಲ್ಲಿ ನಗದು ಅಥವಾ ಸಾಲದ ಬಿಲ್ಲನ್ನು ನೀಡದಿರುವುದು ಕಂಡು ಬಂದ ಕಾರಣ ಅಧಿಕಾರಿಗಳು ಮಾರಾಟ ಮಳಿಗೆಯ ವಿರುದ್ಧ ಅಗತ್ಯ ಕ್ರಮ ಕೈಗೊಂಡಿದ್ದಾರೆ.
‘ಕೃಷಿ ಪರಿಕರ ಪರಿವೀಕ್ಷಕರು ತಾಲ್ಲೂಕಿನ ಎಲ್ಲ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ನಿಯಮಿತವಾಗಿ ಬೇಟಿ ನೀಡಬೇಕು. ಕೃಷಿ ಪರಿಕರಗಳನ್ನು ನಿಯಮ ಬಾಹಿರವಾಗಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತ ಮಳಿಗೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ರಸಗೊಬ್ಬರ ಅಥವಾ ಮತ್ತಿತರ ಕೃಷಿ ಪರೀಕರಗಳನ್ನು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಎಚ್ಚರಿಸಿದ್ದಾರೆ. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಉಪಸ್ಥಿತರಿದ್ದರು.

Share this Article