ಶಿರಹಟ್ಟಿ: ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವಂತೆ ಹಾಗೂ ಹಾಸ್ಟೇಲ್‍ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನಿಂದ ಮನವಿ ಸಲ್ಲಿಸಿದರು.
ಈ ವೇಳೆ ಎಬಿವಿಪಿ ಶಿರಹಟ್ಟಿ ಘಟಕದ ಕಾರ್ಯದರ್ಶಿ ಪರಶುರಾಮ ಕಳ್ಳಿಮನಿ ಮಾತನಾಡುತ್ತಾ, ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ನಂಬಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ ಕಳೆದ ವರ್ಷದ ವಿದ್ಯಾರ್ಥಿ ವೇತನ ಬಾರದೇ ಇರುವದರಿಂದ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದಲ್ಲದೇ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಮತ್ತು ರೈತ ವಿದ್ಯಾನಿಧಿಯನ್ನು ರದ್ದುಗೊಳಿಸಿರುವುದು ಖಂಡನೀಯ. ಕೂಡಲೇ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ವಿದ್ಯಾರ್ಥಿಗಳು ಹಾಸ್ಟೇಲ್‍ಗಳ ಪ್ರವೇಶಾತಿಗಳ ಕುರಿತು ಅರ್ಜಿ ಸಲ್ಲಿಸಿದರೂ ಇದುವರೆಗೂ ಆಯ್ಕೆ ಪ್ರಕ್ರಿಯೆ ಮಾಡದೇ ಇರುವುದು ನೋವಿನ ಸಂಗತಿ. ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಕೊಡಬೇಕಾದ ಕಿಟ್‍ಗಳನ್ನು ನೀಡಬೇಕು ಪ್ರತಿ ವಿದ್ಯಾರ್ಥಿಗೆ ಊಟಕ್ಕೆ ನೀಡುವ 1850 ರೂಗಳನ್ನು ಹೆಚ್ಚಳ ಮಾಡಬೇಕು. ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಇಲಾಖೆ ಮತ್ತು ಅಲ್ಪ ಸಂಖ್ಯಾತ ಇಲಾಖೆಗಳ ಹಾಸ್ಟೇಲ್‍ಗಳನ್ನು ಸಂಖ್ಯೆಯನ್ನು ಹೆಚ್ಚಿಸಬೇಕು. ವಿಳಂಬ ನೀತಿಯನ್ನು ಸರಕಾರ ತೋರಿದಲ್ಲಿ ಮುಂದಿನ ದಿನಮಾನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಭಿಷೇಕ್ ಭೋರಶೆಟ್ಟರ್, ವಿನಿತ್ ಜೈನ್, ಪ್ರೀತಮ್ ಪಲ್ಲೇದ, ಬಸವರಾಜ ಪೂಜಾರ, ಶಶಾಂಕ್ ಪಲ್ಲೇದ, ಸಾಗರ್, ಮೈಲಾರಪ್ಪ ಹಾಗೂ ನೂರಾರು ಎಬಿವಿಪಿ ಕಾರ್ಯಕರ್ತರು ಇದ್ದರು.
ವಿದ್ಯಾರ್ಥಿವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಎಬಿವಿಪಿಯಿಂದ ಮನವಿ
