ಸಿಎ ಉತ್ತೀರ್ಣನಾದ ಜಕ್ಕಲಿಯ ಅಜಯಗೆ ಚನ್ನು ಪಾಟೀಲ ಫೌಂಡೇಶನ್‌ದಿಂದ ಸನ್ಮಾನ

Samagraphrabha
2 Min Read

ನರೇಗಲ್ಲ :ಅಖಿಲ ಭಾರತ ಚಾರ್ಟರ್ಡ್ ಅಕೌಂಟೆನ್ಸಿ(ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರಿನಿಂದ ಸಮೀಪದ ಜಕ್ಕಲಿ ಗ್ರಾಮಕ್ಕೆ ಅಗಮಿಸಿದ ಅಜಯ ದೊಡ್ಡಮೇಟಿಗೆ ಗಜೇಂದ್ರಗಡದ ಚನ್ನು ಪಾಟೀಲ ಫೌಂಡೇಶನ್‌ದ ಅಧ್ಯಕ್ಷ ಉಮೇಶ ಪಾಟೀಲ ಇವರು ಸೋಮವಾರ ಸುಭಾಸ ದೊಡ್ಡಮೇಟಿಯವರ ಮನೆಗೆ ಆಗಮಿಸಿ ಫೌಂಡೇಶನ್ ವತಿಯಿಂದ ಎಲ್ಲರ ಪರವಾಗಿ ಅಜಯನಿಗೆ ಶಾಲು ಹೊದಿಸಿ, ಹಾರ ಹಾಕಿ ಫಲ ಪುಷ್ಪ ನೀಡಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಉಮೇಶ ಪಾಟೀಲರು ಗ್ರಾಮೀಣ ಪ್ರದೇಶದ ರೈತನ ಮಗನೊಬ್ಬ ತನ್ನ ಪರಿಶ್ರಮ ಸತತ ಅಭ್ಯಾಸ ಶ್ರದ್ಧೆಯಿಂದ ಓದಿ ಸಿಎ ಉತ್ತೀರ್ಣನಾಗಿದ್ದು ನಮಗೆಲ್ಲರಿಗೂ ಸಂತೋಷದ ವಿಷಯ. ಇಡೀ ತಾಲೂಕು ಜಿಲ್ಲೆ ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ಅಜಯ ದೊಡ್ಡಮೇಟಿಗೆ ಎಲ್ಲರ ಪರವಾಗಿ ಅಭಿನಂದನೆಗಳು ಎಂದರು.
ಗ್ರಾಮೀಣ ಮಟ್ಟದಲ್ಲಿ ಇಂತಹ ಸಾಧನೆ ಮಾಡುವುದು ಅಪರೂಪ. ಇಲ್ಲಿ ಇಂತಹ ಸಾಧನೆಗೆ ಅಷ್ಟೊಂದು ಅನುಕೂಲತೆಗಳು ಇರುವುದಿಲ್ಲ. ಆದಾಗ್ಯೂ ಅಜಯ ಛಲ ಬಿಡದ ತ್ರಿವಿಕ್ರಮನಂತೆ ಈ ಸಾಧನೆಗೈದಿರುವುದಕ್ಕೆ ಚನ್ನು ಪಾಟೀಲ ಫೌಂಡೇಶನ್‌ದಿಂದ ಅವರನ್ನು ಸನ್ಮಾನಿಸಿ ಗೌರವಿಸುತ್ತಿದ್ದೇವೆ ಎಂದರು.
ಅಜಯ ತಾನು ಸಾಧಿಸಿದ ಸಂಗತಿಯನ್ನು ಇತರರಿಗೂ ಮಾರ್ಗದರ್ಶನ ಮಾಡಬೇಕು. ಅತ್ಯುನ್ನತ ಪರೀಕ್ಷೆ ಪಾಸಾಗುವುದು ಅಷ್ಟು ಸುಲಭದ ಮಾತಲ್ಲ. ತನ್ನ ಗ್ರಾಮವನ್ನು ಮರೆಯದೆ ಆತ ಗ್ರಾಮಕ್ಕೆ ಏನೆಲ್ಲವನ್ನೂ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಬೇಕೆಂದು ಉಮೇಶ ಪಾಟೀಲ ಹೇಳಿದರು.
ಈ ಸಮಾರಂಭದ ಅತಿಥಿಯಾಗಿದ್ದ ಶಿಕ್ಷಣ ಪ್ರೇಮಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಅಜಯ ಸಂಘರ್ಷದ ಜೀವನ ಎದುರಿಸಿ ಸಿಎ ಪಾಸು ಮಾಡಿದ್ದಾನೆ. ಇದು ಎಲ್ಲ ಗ್ರಾಮೀಣ ಯುವಕ-ಯುವತಿಯರಿಗೆ ಮಾದರಿಯಾಗಬೇಕು. ಅವರೂ ಸಹ ಇವನಂತೆ ದೊಡ್ಡ ಕನಸನ್ನು ಕಟ್ಟಿಕೊಂಡು ಅದನ್ನು ನನಸು ಮಾಡಲು ಮುಂದಾಗಬೇಕೆಂದರು.
ಇನ್ನೋರ್ವ ಅತಿಥಿ ನಿವೃತ್ತ ಮುಖ್ಯ ಶಿಕ್ಷಕ ಪತ್ರಕರ್ತ ಅರುಣ ಕುಲಕರ್ಣಿ ಮಾತನಾಡಿ ಅಜಯನ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಆತ ಅದೆಷ್ಟೇ ದೊಡ್ಡ ಹುದ್ದೆಗೆ ತಲುಪಿದರೂ ತನ್ನ ತಂದೆ-ತಾಯಿ, ಗ್ರಾಮ ಮತ್ತು ಬಂಧುಗಳನ್ನು ಮರೆಯದಿರಲಿ. ಅಹಂಕಾರ ಎಂದಿಗೂ ಅವನ ಬಳಿ ಸುಳಿಯದಿರಲಿ. ಅವನ ಸಾಧನೆಗೆ ತಕ್ಕಂತೆ ಅವನಿಗೆ ಉತ್ತಮ ಹುದ್ದೆ ದೊರಕಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜಯ ನನ್ನ ಓದಿಗೆ ನಮ್ಮ ಕುಟುಂಬದವರ ಬೆಂಬಲ ಇತ್ತು. ಪರೀಕ್ಷೆಯ ತರಬೇತಿಯನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿರುವೆ, ವಿದ್ಯಾರ್ಥಿಗಳು ದೃಢ ನಿರ್ಧಾರದಿಂದ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಯೋಚಿಸುವುದರಿಂದ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಬದಲಾಗಿ ಮಾಡಿಯೇ ತಿರುತ್ತೇನೆ ಎಂದು ಮಸಸ್ಸು ಮಾಡಿದರೇ ಸಾಧನೆ ಮಾಡಲು ಸಾಧ್ಯ. ಓದಿನಲ್ಲಿ ಆಸಕ್ತಿ, ಪ್ರೀತಿ ಇರಬೇಕು ಎಂದು ತಿಳಿಸಿ, ಈ ನಿಮ್ಮ ಪ್ರೀತಿ, ಅಭಿಮಾನವನ್ನು ಎಂದಿಗೂ ನಾನು ಮರೆಯುವುದಿಲ್ಲ. ಎಂದಿಗೂ ನಾನು ನಿಮ್ಮ ಅಜಯನೇ ಆಗಿರುತ್ತೇನೆ ಎಂದರು.
ಸಭೆಯನ್ನುದ್ದೇಶಿಸಿ ಉಮೇಶ ಆರ್. ಪಾಟೀಲ, ಕಳಕಪ್ಪ ಕರಮುಡಿ, ಡಾ.ಎ.ವಿ. ನರೇಗಲ್ಲ ಮಾತನಾಡಿದರು.
ಕಾರ್ಯಕ್ರಮದ ರೂವಾರಿ ಗುರುಲಿಂಗಯ್ಯ ಮಂಟಯ್ಯನಮಠ ವಹಿಸಿದ್ದರು,
ಈ ವೇಳೆಯಲ್ಲಿ ಶಿವನಾಗಪ್ಪ ದೊಡ್ಡಮೇಟಿ, ಮಹಾದೇವಪ್ಪ ಮೆಣಸಗಿ, ಮುತ್ತಣ್ಣ ಮುಗಳಿ, ಚನ್ನಬಸವ ಅರಹುಣಸಿ, ಉಮೇಶ ಮೇಟಿ, ರಮೇಶ ಮಾಸ್ತಿ, ವೀರಣ್ಣ ಗುಜಮಾಗಡಿ, ಶರಣಪ್ಪ ತಳವಾರ, ತಳವಾರ, ಹನಮಂತ ತಳವಾರ, ವಿರುಪಾಕ್ಷಪ್ಪ ಅಂಗಡಿ, ಕಳಕಪ್ಪ ಸರ್ವಿ, ಪತ್ರಕರ್ತರಾದ ಸಂಗಮೇಶ ಮೆಣಸಿಗಿ, ಮಲ್ಲಯ್ಯ ಗುಂಡಗೋಪುರಮಠ ಸೇರಿದಂತೆ ದೊಡ್ಡಮೇಟಿ ಕುಟುಂಬದ ಪರಿವಾರದವರು, ಇನ್ನಿತರರು ಇದ್ದರು.
ಶಿವಕುಮಾರ ದಡ್ಡೂರ ಸ್ವಾಗತಿಸಿ, ನಿರೂಪಿಸಿದರು.

Share this Article