ನರೇಗಲ್ಲ : ನೀವು ಕಲಿತ ಶಾಲೆಯನ್ನು, ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬೇಡಿ. ನೀವುಗಳು ಸಂಸ್ಕಾರವಂತರಾಗಿ ಬಾಳಿದರೆ ಅದೇ ನೀವು ಈ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಚೇರಮನ್ ಡಾ. ಜಿ. ಕೆ. ಕಾಳೆ ಹೇಳಿದರು.
ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ 2025-26ನೆ ಸಾಲಿನ ವಿವಿಧ ಸಾಂಘಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹಳಷ್ಟು ಕನಸುಗಳನ್ನಿಟ್ಟುಕೊಂಡು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು ಈ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಅದಕ್ಕೆ ಇಂಬುಗೊಡುವಂತೆ ಈ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ಮತ್ತಿತರರು ತಮ್ಮ ಸಮರ್ಪಣಾ ಮನೋಭಾವನೆಯಿಂದ ದುಡಿದು ಶಾಲೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ. ಇದೆಲ್ಲವನ್ನೂ ಮನಗಂಡು ನೀವುಗಳು ಈ ಶಾಲೆಯ ಕೀರ್ತಿಯನ್ನು ಹೆಚ್ಚಿಸುವತ್ತ ಗಮನ ನೀಡಬೇಕೆಂದು ಡಾ. ಕಾಳೆ ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ ಪ್ರತಿ ವ್ಯಕ್ತಿಯಲ್ಲಿಯೂ ಒಂದು ಕಲೆ, ಒಂದು ಪ್ರತಿಭೆ ಅಡಗಿರುತ್ತದೆ. ಮೊದಲು ನೀವುಗಳು ನಿಮ್ಮಲ್ಲಿ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನು ತಿಳಿದುಕೊಳ್ಳಿ. ಅದನ್ನು ನಿಮ್ಮ ಶಿಕ್ಷಕರಿಗೆ ತಿಳಿಸಿ, ಅದರಲ್ಲಿ ಪರಣಿತಿಯನ್ನು ಪಡೆಯಲು ಶ್ರಮಿಸಿ. ಒಂದು ಕಲೆಯನ್ನು ಆಯ್ದುಕೊಂಡರೆ ಮತ್ತೆ ಬೇರೆಡೆಗೆ ನೋಡದೆ ಅದರಲ್ಲಿಯೆ ನಿಮ್ಮ ಸಾಧನೆಯನ್ನು ಮುಂದುವರೆಸಿ ಜಗದ್ವಿಖ್ಯಾತರಾಗಿ ಎಂದರು.
ಜೀವನದಲ್ಲಿ ಯಾವುದೇ ಯಶಸ್ಸು ಸುಲಭವಾಗಿ ಒಲಿಯುವಂತಹುದಲ್ಲ. ಅದಕ್ಕೆ ಸತತ ಸಾಧನೆ ಬೇಕು. ಈ ಸಾಧನೆಗೆ ಪರಿಶ್ರಮ, ಶೃದ್ಧೆ, ಪ್ರಾಮಾಣಿಕ ಪ್ರಯತ್ನ ಎಲ್ಲವೂ ಬೇಕಾಗುತ್ತದೆ. ತಾಳ್ಮೆಯೂ ಸಹ ಮುಖ್ಯ. ಒಮ್ಮೆಲೆ ಸಿಕ್ಕ ಯಶಸ್ಸು ಎಂದಿಗೂ ಶಾಶ್ವತವಲ್ಲ. ಹಂತಹAತವಾಗಿ ಪಡೆದ ಯಶಸ್ಸು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುವುದರ ಜೊತೆಗೆ ಶಾಶ್ವತವಾಗಿ ನಿಮ್ಮಲ್ಲಿ ಉಳಿಯುತ್ತದೆ. ಅಂತಹ ಯಶಸ್ಸನ್ನು ಕಾಣಲು ನೀವುಗಳು ತಾಳ್ಮೆಯಿಂದ ಸಾಧನೆಯಲ್ಲಿ ತೊಡಗಬೇಕೆಂದರು.
ಸಭೆಯನ್ನುದ್ದೇಶಿಸಿ ಸಂಸ್ಥೆಯ ಆಡಳಿತಾಧಿಕಾರಿ ಎನ್. ಆರ್.ಗೌಡರ ಮಾತನಾಡಿದರು. ವೇದಿಕೆಯ ಮೇಲೆ ಉಚಿತ ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನಪ್ಪ ಮೆಣಸಗಿ, ಮುಖ್ಯೋಪಾಧ್ಯಾಯಿನಿ ಬಿ. ಜಿ. ಶಿರ್ಸಿ ಉಪಸ್ಥಿತರಿದ್ದರು. ಶಿಕ್ಷಕಿ ಎಂ. ಎಂ. ಶಿಳ್ಳಿನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಕೋಳಿವಾಡ ನಿರೂಪಿಸಿದರು. ಶಿಕ್ಷಕ ಒಂಟೇಲಿ ವಂದಿಸಿದರು.
ಕಲಿಸಿದ ಗುರುಗಳನ್ನು ಮರೆಯಬೇಡಿ; ಸಂಸ್ಕಾರವಂತರಾಗಿ-ಡಾ. ಕಾಳೆ
