ಬೆಂಗಳೂರು: ಗಣೇಶೋತ್ಸವ ಸಂದರ್ಭದಲ್ಲಿ ಪಿಓಪಿ ಗಣೇಶ ಮೂರ್ತಿಗಳ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಗದಗ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘ, ಹಾಗೂ ಬೈಲಹೊಂಗಲ ಗಣೇಶ ಮೂರ್ತಿ ತಯಾರಕರ ಸಂಘ,ಧಾರವಾಡ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘ, ಬೆಂಗಳೂರ ಗ್ರಾಮಾಂತರ ಗಣೇಶ ವಿಗ್ರಹ ತಯಾರಿಸುವ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕ ಸಂಘಟನೆಯ ವತಿಯಿಂದ ಬುಧವಾರ, ಬೆಂಗಳೂರಿನ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ. ಮನವಿ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮೂರ್ತಿ ತಯಾರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ, ಪಿಓಪಿ ಗಣೇಶ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುವುದಲ್ಲದೇ ಇದರಿಂದ ವರ್ಷವಿಡಿ ಮಣ್ಣಿನ ಗಣೇಶ
ಮೂರ್ತಿಗಳನ್ನು ತಯಾರಿಸುವ ರಾಜ್ಯದ ಕಲಾವಿದರಿಗೆ ಹೆಚ್ಚು ನಷ್ಟ ಉಂಟಾಗಲಿದೆ ಎಂದು ಹೇಳಿದರು.
ಈಗಾಗಲೇ ಸರ್ಕಾರ ಪಿಓಪಿ ಗಣೇಶ ಮೂರ್ತಿಗಳ ನಿಷೇಧಿಸುವಂತೆ ಆದೇಶಿಸಿದ್ದರೂ ಗಣೇಶೋತ್ಸವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಮಾರಾಟ ನಡೆಯುತ್ತಿದೆ. ಇದನ್ನು ತಡೆಯಲು ಅಧಿಕಾರಿಗಳು ಈಗಿನಿಂದಲೇ ಒತ್ತು ನೀಡಬೇಕು. ಪಿಓಪಿ ಗಣೇಶ ಮಾರಾಟ ಕಂಡು ಬಂದಲ್ಲಿ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾಧ್ಯಕ್ಷ ಪ್ರಕಾಶ ಬಡಿಗೇರ, ಬೈಲಹೊಂಗಲ ತಾಲ್ಲೂಕ ಅಧ್ಯಕ್ಷ ರಾಜು ಬಡಿಗೇರ,ಬೆಂಗಳೂರ ಗ್ರಾಮಾಂತರ ಮೂರ್ತಿ ತಯಾರಕರ ಸಂಘದ ಅಧ್ಯಕ್ಷ ಮಂಜುನಾಥ, ತಾವರಕೇರೆ ರವಿಚಂದ್ರ ರಾಮಭಗವಾನ್, ರಾಜಗೋಪಾಲ, ಅನೇಕ ಗಣೇಶ ಮೂರ್ತಿ ತಯಾರಕರು ಹಾಜರಿದ್ದರು.

