ಮದ್ಯ ಮಾರಾಟ ಬಂದ್ ಮಾಡಿಸಲು ಸಾರ್ವಜನಿಕರು ಸಲಹೆ
ನರೇಗಲ್: ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿಂದ ಮೊಹರಂ ಹಬ್ಬ ಆಚರಿಸಬೇಕು ಎಂದು ರೋಣ ಸಿಪಿಐ. ಎಸ್. ಎಸ್. ಬೀಳಗಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಭಾನುವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಶಾಂತಿ ಸಭೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು ಖುಷಿ ನೀಡಿತು. ನಮ್ಮ ದೇಶವು ಸರ್ವಜನಾಂಗದ ಶಾಂತಿ ತೋಟವಿದ್ದಂತೆ. ತ್ಯಾಗ ಪ್ರತೀಕವಾದ ಹಬ್ಬದಲ್ಲಿ ಭಕ್ತಿ ಇರಬೇಕು ಆದ್ದರಿಂದ ಹಿಂದೂ, ಮುಸ್ಲಿಂ ಸೇರಿ ನಾನಾ ಧರ್ಮೀಯರು ಅನ್ಯ ಧರ್ಮದ ಆಚರಣೆಗಳನ್ನು ಗೌರವದಿಂದ ಕಾಣಬೇಕು. ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದರು. ಸಾಮಾಜಿಕ ಜಾಲತಾಣದಲ್ಲಿ ಗಲಭೆ ನೀಡುವಂತೆ ಪೋಸ್ಟ್ ಹಾಕಿದರೆ ನಂಬಬೇಡಿ ಇಲಾಖೆಯ ಗಮನಕ್ಕೆ ತಂದರೆ ಕ್ರಮ ಜರುಗಿಸಲಾಗುವುದು ಎಂದರು.
ಪಿಎಸ್ಐ ಐಶ್ವರ್ಯ ನಾಗರಾಳ ಮಾತನಾಡಿ, ಮೊಹರಂನಲ್ಲಿ ದೇವರುಗಳನ್ನು ಪ್ರತಿಷ್ಠಾಪನೆ ಮಾಡುವ ಪ್ರತಿ ಮಸೂತಿಯಿಂದ ಐದಾರು ಯುವಕರು ಜವಾಬ್ದಾರಿ ತೆಗೆದುಕೊಂಡು, ದೇವರು ಹೊಳಿಗೆ ಹೋಗುವ, ಮೆರವಣಿಗೆ ಹೊರಡುವ ಹಾಗೂ ಅಲ್ಲಿನ ಘಟನೆಗಳ ಕುರಿತು ಆಗಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು. ಹಬ್ಬವನ್ನು ಆಚರಣೆ ಮಾಡುವ ಉತ್ಸಾಹದ ಭರದಲ್ಲಿ ಅನ್ಯರಿಗೆ ತೊಂದರೆ ಮಾಡಬಾರದು. ಮೇರವಣಿಗೆ ಸಂದರ್ಭಗಳಲ್ಲಿ ಉದ್ರೇಕ ಹಾಗೂ ಪ್ರಚೋದನಕಾರಿ ಘೋಷಣೆಗಳನ್ನು ಕೂಗದೆ ದೇವರ ನಾಮಸ್ಮರಣೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಮೊಹರಂ ಮುಖ್ಯದಿನದಂದು ಬಾರ್ಗಳನ್ನು ಬಂದ್ ಮಾಡಿಸಬೇಕು ಹಾಗೂ ಪರವಾನಿಗೆ ಇಲ್ಲದೆ ಅನಧಿಕೃತ ಮಾರಾಟ ಮಾಡುವುದನ್ನು ಸಹ ಬಂದ್ ಮಾಡಿಸಬೇಕು ಎಂದು ಸಲಹೆ ನೀಡಿದರು. ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಬಾರ್ ಬಂದ್ ಮಾಡಿಸುವ ಕುರಿತು ಮನವಿ ಮಾಡುತ್ತೇವೆ ಹಾಗೂ ಅನಧಿಕೃತ ಮಾರಾಟ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ ಗ್ರಾಮದ ಹಿರಿಯ ಎಂ. ಎಸ್. ಧಡೆಸೂರಮಠ, ಎ. ಎ. ನವಲಗುಂದ, ಸೋಮಪ್ಪ ಹನಮಸಾಗರ, ಜಿ. ಎಂ. ನದಾಫ್, ಎಚ್. ಆರ್. ಕೊಪ್ಪಳ, ಕೆ. ಎಚ್. ಅಣ್ಣಿಗೇರಿ, ಖಾದರಬಾಷಾ ಹೂಲಗೇರಿ, ಮೌಲಾಸಾಬ್, ರಮೇಶ ಕೊಲಕಾರ, ಕೆ. ಎಸ್. ಗಡಾದ, ನಾಗರಾಜ ವಡ್ಡರ, ಸೀರಾಜ ಹೊಸಮನಿ, ಹಸನಸಾಬ ಕೊಪ್ಪಳ ಇದ್ದರು.
