ಕಾನೂನು ಕಾಪಾಡುವ ಪ್ರಾಮಾಣಿಕ ಸಂಸ್ಥೆ
ನರೇಗಲ್: ದೇಶದಲ್ಲಿನ ಜನರು ಭಯವಿಲ್ಲದ ಬದುಕು ನಡೆಸಲು ಗಡಿ ಕಾಯುವ ಸೈನಿಕರು, ರಾಜ್ಯದಲ್ಲಿ ಕಾನೂನು ಕಾಪಾಡುವ ಪೊಲೀಸ್ರು ಹಾಗೂ ಅವರ ಜೊತೆಗೆ ನಿಸ್ವಾರ್ಥ ಸೇವೆ ಮಾಡುವ ಗೃಹ ರಕ್ಷಕ ದಳದವರು ಕಾರಣಿಕತೃರಾಗಿದ್ದಾರೆ ಅದಕ್ಕಾಗಿ ಅವರಿಗೆಲ್ಲಾ ನಾವು ಕೃತಜ್ಞರಾಗಿ ಇರಬೇಕು ಎಂದು ರೋಣ ಶಾಸಕ ಜಿ. ಎಸ್. ಪಾಟೀಲ ಹೇಳಿದರು.
ಪಟ್ಟಣ ಪಂಚಾಯ್ತಿಯ ಗಾಂಧಿ ಭವನದಲ್ಲಿ ಶನಿವಾರ ನಡೆದ ರಾಜ್ಯ ಗೃಹರಕ್ಷಕ ದಳದ 21ನೇ ವಾರ್ಷಿಕೋತ್ಸವ, ನರೇಗಲ್ ಘಟಕದ ಕಾರ್ಯಾಲಯದ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿರ್ಭಯ ಜೀವನ ನಡೆಸಲು ಅಪಾರ ಕೊಡುಗೆ ನೀಡುವ ಗೃಹರಕ್ಷಕ ದಳದಲ್ಲಿ ನಾನು, ನಮ್ಮ ತಂದೆ ಹಾಗೂ ಹಿರಿಯ ಸಹೋದರ ಮೂವರು ಯುನಿಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದೇವೆ ಎನುವ ಸಂತೃಪ್ತಿಯಿದೆ. ಇದೊಂದು ಕಾನೂನು ಕಾಪಾಡುವ ಪ್ರಾಮಾಣಿಕ ಸಂಸ್ಥೆಯಾಗಿದೆ ಎಂದರು. ಇವರಿಗೆ ಪಾಳುಬಿದ್ದ ಕಟ್ಟಡ ನೀಡಿದದ್ದರು ಅದನ್ನು ಅಚ್ಚುಕಟ್ಟಾಗಿ ಸರಿಪಡಿಸಿ ಉಪಯೋಗಕ್ಕೆ ಮುಂದಾಗಿರುವ ಕಾರ್ಯ ಶ್ಲಾಘನೀಯ. ಗೃಹರಕ್ಷಕ ದಳದವರ ಸೇವೆಗೆ ತಕ್ಕಂತೆ ಸರ್ಕಾರ ಅನಕೂಲತೆ ಒದಗಿಸಿಲ್ಲ, ಇವರೆಲ್ಲರೂ ಒಗ್ಗಟ್ಟಿನಿಂದ ತಮ್ಮ ಹಕ್ಕುಗಳನ್ನು ಸರ್ಕಾರಕ್ಕೆ ಒತ್ತಾಯ ಮಾಡಿ ಕೇಳಲು ಮುಂದಾದರೆ ಅವರ ಜೊತೆಗೆ ಇರುತ್ತೇನೆ ಎಂದು ಭರವಸೆ ನೀಡಿದರು. ಗಾಂಧಿ ಭವನದ ಜೀರ್ಣೋದ್ಧಾರ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಅಂದಾಜು 24 ಲಕ್ಷದ ಕ್ರೀಯಾಜೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಜಾತ್ರೆ, ಹಬ್ಬಹರಿದಿನ, ಪ್ರತಿಭಟನೆ, ಮೆರವಣಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಜೊತೆಗೂಡಿ ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳದ ಸೇವೆ ಅಪಾರ ಎಂದರು.
ಬಾಗಲಕೋಟೆಯ ಸಿದ್ದನಕೊಳ್ಳ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಗೃಹ ರಕ್ಷಕ ದಳದ ಸೇವೆಯನ್ನು ಗಣನೆಗೆ ತೆಗೆದುಕೊಂಡು ಖಾಯಂ ಮಾಡಲು ಹಾಗೂ ಅವರ ಜೀವನಕ್ಕೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಅಗತ್ಯಬಿದ್ದರೆ ಸಿಎಂ ಕಚೇರಿಗೆ ಹೋಗಿ ಮನವಿ ಸಲ್ಲಿಸುವುದಾಗಿ ಹೇಳಿದರು.
ಸಾಹಿತಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿದರು. ಸಭಾ ಕಾರ್ಯಕ್ರಮದ ಮೊದಲು ನರೇಗಲ್ ಘಟಕದ ನೂತನ ಕಾರ್ಯಾಲಯವನ್ನು ಶಾಸಕರು ಉದ್ಘಾಟಿಸಿದರು ನಂತರ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಈ ವೇಳೆ ನಿವೃತ್ತ ಸೈನಿಕರನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು, ದಾನಿಗಳನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ರೋಣ ತಾಲ್ಲೂಕು ಗ್ಯಾಂರಟಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನೂಲ್ಕಿ, ಗದಗ ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಬೋಧಕ ಕಿರಣಕುಮಾರ ಕಟಗಿ, ನರೇಗಲ್ ಶಹರ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ, ಕರವೇ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ, ತಾ.ಪಂ. ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ಎಂ. ಎಸ್. ಧಡೆಸೂರಮಠ, ಪಿಎಸ್ಐ ಐಶ್ವರ್ಯ ನಾಗರಾಳ ಇದ್ದರು.
—
ನರೇಗಲ್ ಪಟ್ಟಣದಲ್ಲಿ ಶನಿವಾರ ನಡೆದ ರಾಜ್ಯ ಗೃಹರಕ್ಷಕ ದಳದ 21ನೇ ವಾರ್ಷಿಕೋತ್ಸವ, ನೂತನ ಕಾರ್ಯಾಲಯ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಜಿ. ಎಸ್. ಪಾಟೀಲ ಮಾತನಾಡಿದರು.
