ಗದಗ : ಬೆಟಗೇರಿ ಬಸ್ ನಿಲ್ದಾಣದಲ್ಲಿ ಬೆಟಗೇರಿ ವೃತ್ತ ಸಿಪಿಐ ಅಧಿಕಾರಿಗಳಾದ ಧೀರಜ್ ಶಿಂಧೆಯವರು ಅಂತರರಾಷ್ಟ್ರೀಯ ಮಾದಕ ದ್ರವ್ಯದ ವಿರೋಧ ದಿನಾಚರಣೆ ಕುರಿತು ಪೊಲೀಸ ಇಲಾಖೆಯಿಂದ ಪ್ಲೇ ಕಾರ್ಡ್ ಹಿಡಿದು ಬೈಕ್ ರ್ಯಾಲಿಯನ್ನು ಚಾಲನೆ ನೀಡಿ ಮಾತನಾಡಿದ ಅವರು ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ಒಂದು ಅಪರಾಧವಾಗಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಸಮಗ್ರ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಸಂಪೂರ್ಣ ಒಂದು ಪೀಳಿಗೆಯನ್ನು ನಾಶಪಡಿಸುವ ಸಾಮಥ್ರ್ಯ ಹೊಂದಿದೆ. ಯುವಕರ ದೈಹಿಕ, ಮಾನಸಿಕ, ನೈತಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಇದರಿಂದ ಉಂಟಾಗುವ ಹಾನಿ ಅಪಾರ, ಮಾದಕ ದ್ರವ್ಯಗಳ ದುವ್ರ್ಯಸನವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಹೋರಾಡಲು, ಪೋಲಿಸ್ ಅಧಿಕಾರಿಗಳು ದಂಡನಾತ್ಮಕ ಕ್ರಮಗಳು ಮತ್ತು ಜನರಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಅರಿವು ಮೂಡಿಸುವಂತಹ ಪರಿಣಾಮಕಾರಿ ತಂತ್ರಗಳನ್ನು ರೂಪಿಸಬೇಕು. ಪ್ರತಿವರ್ಷ ಜೂನ್ 26 ರಂದು ಅಂತರರಾಷ್ಟ್ರೀಯ ಮಾದಕ ದ್ರವ್ಯ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷವೂ ಸಹ ಎಲ್ಲಾ ಘಟಕಗಳ ಅಧಿಕಾರಿಗಳು ಈ ದಿನವನ್ನು 26-06-2025 ಅರ್ಥಪೂರ್ಣ ಮತ್ತು ಪರಿಣಾಮಕಾರಿಯಾಗಿ ಆಚರಿಸುವ ಮೂಲಕ ಶಿಕ್ಷಣ ಸಂಸ್ಥೆ, ಸಂಘ ಸಂಸ್ಥೆಗಳು, ಯುವಕರ ಕ್ಲಬ್, ಕ್ರೀಡಾಪಟುಗಳು, ಧಾರ್ಮಿಕ ಮತ್ತು ಆಧ್ಯಾತ್ಮಕ ಚಿಂತಕರು ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಮುಂದುವರೆದು ಮಾತನಾಡಿದ ಅವರು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಆರೋಗ್ಯಕರ ಆಯ್ಕೆಗಳನ್ನು ಮಾಡುವಂತೆ ಮತ್ತು ಮಾದಕ ದ್ರವ್ಯಗಳಿಂದ ದೂರವಿರುವಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವುದು. ಯುವಕರ ಕ್ಲಬ ಮತ್ತು ಸಂಘಗಳಲ್ಲಿ ನಾರ್ಕೋಟಿಕ್ ಪದಾರ್ಥಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು. ಕ್ರೀಡಾಪಟುಗಳು, ಚಲನಚಿತ್ರ ನಟರಂತಹ ರೋಲ್ ಮಾಡೆಲ್ಗಳನ್ನು ಯುವಜನತೆಯನ್ನು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಮತ್ತು ಹಾನಿಕಾರಕ ಸಹವರ್ತಿಗಳ ಗುಂಪುಗಳನ್ನು ತಪ್ಪಿಸುವಂತೆ ಪ್ರೇರೇಪಿಸಲು ಸೇರಿಸಿಕೊಳ್ಳುವುದು. ಸಮುದಾಯದ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರು ಜನರ ನಡವಳಿಕೆಯ ಮಾದರಿಗಳನ್ನು ಸಕಾರಾತ್ಮಕವಾಗಿ ರೂಪಿಸಲು ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಾಯ ಮಾಡುತ್ತಾರೆ ಎಂದು ತಿಳಿಸಿದರು.
ಈ ಬೈಕ್ ರ್ಯಾಲಿಯು ಬೆಟಿಗೇರಿ ಬಸ್ ನಿಲ್ದಾಣದಿಂದ ಪ್ರಾರಂಭಿಸಿ ತೆಂಗಿನಕಾಯಿ ಬಜಾರ್ ಕುರಹಟ್ಟಿಪೇಟೆ ಮಾರ್ಗವಾಗಿ ಹಾತಲಗೇರಿ ನಾಕಾ, ಕೆ ಸಿ ರಾಣಿ ರೋಡ್, ಗಾಂಧಿ ಸರ್ಕಲ್ ಮೂಲಕ ಹಾಯ್ದು ಮುನ್ಸಿಪಲ್ ಮೈದಾನಕ್ಕೆ ಬಂದು ಮುಕ್ತಾಯ ಮಾಡಿದ್ದು ಆ ಕಾಲಕ್ಕೆ ವಿವಿಧ ಮಾದಕ ದ್ರವ್ಯಗಳ ಘೋಷವಾಕ್ಯಗಳನ್ನು ತಿಳಿಸುತ್ತಾ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಈ ಬೈಕ್ ರ್ಯಾಲಿಯಲ್ಲಿ ಬೆಟಿಗೇರಿ ಬಡಾವಣೆ ರಾಜೀವಗಾಂಧಿ ನಗರ ಪೋಲಿಸ ಠಾಣೆಯ ಪಿಎಸ್ಐ ಮಾರುತಿ ಜೋಗದಂಡ್ಕರ್, ಬೆಟಗೇರಿ ಬಡಾವಣೆ ಪೋಲಿಸ್ ಠಾಣೆ ಪಿಎಸ್ಐ ಶ್ರೀ ಲಕ್ಷ್ಮಪ್ಪ ಆರಿ ಪಿಎಸ್ಐ ಸೇರಿದಂತೆ ಬೆಟಿಗೇರಿ ಬಡಾವಣೆಯ ಪೋಲಿಸ್ ಠಾಣೆ ಹಾಗೂ ಬೆಟಿಗೇರಿ ವೃತ್ತದ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
