ನವಲಗುಂದ: ತಾಲೂಕಿನ ನಾಗನೂರ ಗ್ರಾಮದ ರೈತನಿಗೆ ಕಳಪೆ ಹೆಸರಿನ ಬೀಜ ವಿತರಣೆ ಮಾಡಿ ಮೋಸ ಮಾಡಿದ್ದು ಅವರಿಗೆ ಪರಿಹಾರ ಒದಗಿಸಬೇಕೆಂದು ಮಾಬುಸಾಬ ಯರಗುಪ್ಪಿ ಆಗ್ರಹ ಮಾಡಿದರು.
ಈ ಕುರಿತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಿಬ್ಬಂದಿಗೆ ಮನವಿ ನೀಡಿ ಮಾತನಾಡಿದ ಅವರು ಹುಸೇನಸಾಬ ಮುಜಾವರ ಅವರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ಬೀಜರಾಜ ಬಿತ್ತನೆ ಬೀಜಗಳ 21 ಪಾಕೆಟ್ ತೆಗೆದುಕೊಂಡು ಹೋಗಿ ಬಿತ್ತನೆ ಮಾಡಿದ್ದಾರೆ, ಸುಮಾರು 13 ಎಕರೆ ಹೊಲದಲ್ಲಿ ಬಿತ್ತನೆ ಮಾಡಿದರು ಸಹ ಅಲ್ಲಿ ಹೆಸರಿನ ಬೆಳೆಯು ಹುಟ್ಟಿರುವುದಿಲ್ಲ, ಇದಕ್ಕೆ ಮೂಲ ಕಾರಣ ಕಳಪೆ ಬೀಜವಾಗಿದೆ, ರಸಗೊಬ್ಬರ, ಕೂಲಿ, ಟ್ರ್ಯಾಕ್ಟರ, ಬಾಡಿಗೆ ಸೇರಿ ಎಕರೆಗೆ 10 ರಿಂದ 15 ಸಾವಿರ ರೂ. ಖರ್ಚಾಗಿದ್ದು ಈ ಹಾನಿಯನ್ನು ಸರಿಪಡಿಸುವವರು ಯಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಹುಸೇನಸಾಬ ಮುಜಾವರ ಮಾತನಾಡಿ ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿದ್ದೇ, ಹಾಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ 21 ಪಾಕೆಟ್ ಬೀಜರಾಜ ಹೆಸರಿನ ಬೀಜ ತೆಗೆದುಕೊಂಡು ಹೋಗಿ ಬಿತ್ತನೆ ಮಾಡಿದ್ದೆ, ಆದರೆ ಆ ಹೆಸರು ಹುಟ್ಟಲಿಲ್ಲ, ಇಲ್ಲಿ ಹೆಸರಿನ ಬೀಜ
ಕಳಪೆ ಇರುವುದರಿಂದ ಅವು ಮೊಳಕೆ ಒಡೆಯಲಿಲ್ಲ, ಮುಂಗಾರು ಮಳೆಗೆ ಬಿತ್ತನೆ ಮಾಡಿ ಇದ್ದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದೇನೆ, ಮುಂಗಾರು ಬೆಳೆಯ ಫಸಲಿನ ನಿರೀಕ್ಷೆ ಹುಸಿಯಾಗಿದೆ, ಮುಂದೆ ಎನ ಮಾಡಬೇಕೆಂದು ದಿಕ್ಕು ತೋಚದಾಗಿದೆ ಎಂದು ರೈತ ಮುಜಾವರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಶೀರಅಹ್ಮದ ಹುನಗುಂದ, ಮಹಮ್ಮದಲಿ ಮಿರ್ಜಿ, ಬಾಬುಶ್ಯಾ ಮಕಾಂದಾರ, ಬುಡ್ಡಾ ಅಲ್ಲಿಬಾಯಿ ಉಪಸ್ಥಿತರಿದ್ದರು..

