ಗಜೇಂದ್ರಗಡ :
ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಬರುವ ಸಾರ್ವಜನಿಕರ ಹಣವನ್ನು ಅಭಿವೃದ್ದಿ ಕಾರ್ಯದ ಮೂಲಕ ಸಾರ್ವಜನಿಕರಿಗೆ ಸಮರ್ಪಿಸುವ ಕೆಲಸಕ್ಕೆ ಪ್ರಾಮಾಣಿಕವಾಗಿ ಒತ್ತು ನೀಡಲಾಗುತ್ತಿದೆ ಕಾಮಗಾರಿ ವಿಚಾರದಲ್ಲಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸ್ಥಳೀಯ ಗದಗ ರಸ್ತೆಯ ನವನಿ ಪ್ಲಾಟ್‌ನಲ್ಲಿ ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ 367 (ಭಾನಾಪುರ-ಗದ್ದನಕೇರಿ ಸೆಕ್ಷನ್) ರಲ್ಲಿ ಗಜೇಂದ್ರಗಡ ಪಟ್ಟಣಕ್ಕೆ ಭಾನುವಾರ ಸಂಜೆ ಬೈಪಾಸ್ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಈ ದೇಶದ ಜೀವನಾಡಿ, ದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಸಕ್ಷಮವಾದ ರಸ್ತೆಗಳ ನಿರ್ಮಾಣವಾಗಬೇಕಿದೆ. ಈ ದೆಸೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಮುಂದಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ನಡೆಯುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಲ್ಯಾಂಡ್ ಅಕ್ವಿಜೇಶನ್ ಸಹ ಪ್ರಮುಖವಾಗಿದೆ. ರೈತರ ಜಮೀನುಗಳಿಗೆ ಲೋಕೊಪಯೋಗಿ ಸಚಿವರು, ಶಾಸಕ ಜಿ.ಎಸ್. ಪಾಟೀಲ ಹಾಗೂ ನಾವು ಕೂಡಿಕೊಂಡು ರೈತರಿಗೆ ಉತ್ತಮ ಪರಿಹಾರ ಕೊಡಿಸುವ ನಿರ್ಧಾರ ಕೈಗೊಂಡಿದ್ದು ಅದನ್ನು ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದ ಅವರು, ಯಲಬುರ್ಗಾ ಭಾಗದೊಂದಿಗೆ ವ್ಯವಹಾರ ಮಾಡಬೇಕಾದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಿದೆ. ಈ ಹಿಂದೆ ನಮಗೆ ಗದಗ-ವಾಡಿ ವಿಷಯದಲ್ಲಿ ಪೆಟ್ಟು ಬಿದ್ದಿದೆ. ಯಲಬುರ್ಗಾ ಟಚ್ ಮಾಡುವ ಸಲುವಾಗಿ ನಮ್ಮನ್ನು ಕಟ್ ಮಾಡಿದ್ದಾರೆ. ಹೀಗಾಗಿ ಈ ಕಾಮಗಾರಿ ವಿಷಯದಲ್ಲಿ ಆಗಬಾರದು ಎಂದು ಎಚ್ಚರಿಕೆಯಿಂದ ಕೆಲಸ ಮಾಡಲಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕದ ಸಂಪರ್ಕ ಮುಖ್ಯವಾದರೆ ಉತ್ತರ ಕರ್ನಾಟಕ ಸಮಗ್ರವಾಗಿ ” ಏಕತೆಯನ್ನು ಕಾಪಾಡಿಕೊಳ್ಳುತ್ತದೆ. ಅದಕ್ಕೆ ಶ್ರಮಿಸುತ್ತೇನೆ ಎಂದರು.

ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ, ಈ ಭಾಗದ ಜನರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೈ ಪಾಸ್ 5.6 ಕಿಮೀ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಭೂಮಿ ಕೊಡಲು ಇಲ್ಲಿನ ರೈತರು ಮೀನಮೇಷ ಮಾಡುತ್ತಿದ್ದಾಗ ಸಚಿವ
ರಮೇಶ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ. ಜನಪರ ಕಾಳಜಿಯುಳ್ಳ ಸಂಸದರಿದ್ದು ಘೋಷಿಸಿದ ಪ್ರಮಾಣದಲ್ಲಿ ರೈತರಿಗೆ ಹಣವನ್ನು ನೀಡುವ ಪ್ರಯತ್ನವನ್ನು ಮಾಡುತ್ತೇವೆ ಎಂದ ಅವರು, ಈ ಭಾಗದ ಅಭಿವೃದ್ಧಿಗೆ ಸೊರಬ-ಇಲಕಲ್ ಹಾಗೂ ನರಗುಂದ-ಸಿಂಧನೂರ ರಾಷ್ಟ್ರೀಯ ಹೆದ್ದಾರಿಗಳು ಆರಂಭವಾಗಿಲ್ಲ. ಅಲ್ಲದೆ ಗದಗ-ವಾಡಿ ರೈಲ್ವೆ ಮಾರ್ಗ ಮೂಲನಕ್ಷೆಯಲ್ಲಿ ಗಜೇಂದ್ರಗಡ, ನರೇಗಲ್ ಮಾರ್ಗವಾಗಿದ್ದರೂ ಸಹ ಯೋಜನೆ ತಪ್ಪಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ರೈಲ್ವೆ ಓಡಾಟಕ್ಕೆ ಗಟ್ಟಿಧ್ವನಿಯಲ್ಲಿ ಸಂಸದ ಬೊಮ್ಮಾಯಿ ಅವರು ಪ್ರಯತ್ನಿಸಿದರೆ ಅದು ಸಾಧ್ಯವಾಗುವ ವಿಶ್ವಾಸವಿದೆ ಎಂದರು.
ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ಮಾಜಿ ತಾಂ.ಪಂ ಅಧ್ಯಕ್ಷ ಇಂದಿರಾ ತೇಲಿ,ಉಮೇಶ ಮಲ್ಲಾಪೂರ, ಮುತ್ತಣ್ಣ ಕಡಗದ ರಾಜೇಂದ್ರ ಘೋರ್ಪಡೆ, ಅಶೋಕ ವನ್ನಾಲ, ಅಶೋಕ ನವಲಗುಂದ, ನಿಂಗಪ್ಪ ಕೆಂಗಾರ, ಶಿವರಾಜ ಘೋರ್ಪಡೆ, ಸಿದ್ದಣ್ಣ ಬಂಡಿ, ಶಿವಾನಂದ ಮಠದ, ರಾಜೂ ಸಾಂಗ್ಲೀಕರ, ಮುದಿಯಪ್ಪ ಮುಧೋಳ, ಮೂಖಪ್ಪ ನಿಡಗುಂದಿ, ಹನಮಂತಪ್ಪ ಹಟ್ಟಿಮನಿ, ಮುದಿಯಪ್ಪ ಕರಡಿ, ಯಮನೂರ ತಿರಕೋಜಿ, ರೂಪ್ಲೇಶ ರಾಠೋಡ, ಮುರ್ತುಜಾ ಡಾಲಾಯತ, ಉಮೇಶ ರಾಠೋಡ, ಅಂದಪ್ಪ ಬಿಚ್ಚೂರ, ಬಾಳಾಜಿರಾವ ಬೋಸಲೆ, ಉಮೇಶ ಪಾಟೀಲ, ಸೇರಿದಂತೆ ಅನೇಕರು ಇದ್ದರು.

