ಗಜೇಂದ್ರಗಡ: ರೈತರಿಗೆ ಹಗಲು ಹೊತ್ತಿನಲ್ಲಿ 7 ಗಂಟೆ ನಿರಂತರ ವಿದ್ಯುತ್ ಪೂರೈಸಲು ರಾಜ್ಯಾದ್ಯಂತ 181 ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ಹೇಳಿದರು.
ಇಂಧನ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಪಿಎಂ- ಕುಸುಮ್ ಕಾಂಪೊನೆಟ್- ಸಿ ಅಡಿಯಲ್ಲಿ ಸೌರೀಕರಣ ಯೋಜನೆಗೆ ವರ್ಚುವಲ್ ವೇದಿಕೆ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ರೈತರು ರಾತ್ರಿ ಹೊಲಗಳಿಗೆ ತೆರಳಿ ಬೆಳೆಗಳಿಗೆ ನೀರು ಹಾಯಿಸುವುದನ್ನು ತಪ್ಪಿಸಲು ಸೋಲಾರ್ ವಿದ್ಯುತ್ ನಿರ್ಮಾಣ ಘಟಕಗಳು ಸಹಾಯಕವಾಗಲಿವೆ ಎಂದರು.
ಮುಶಿಗೇರಿಯಲ್ಲಿ ನಿರ್ಮಾಣವಾಗಿರುವ ಈ ಪ್ಲಾಂಟ್ 2.16 ಮೆಗಾ ವಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಇದರಿಂದ ಐದು ಗ್ರಾಮಗಳ ಎರಡು ಕೃಷಿ ಫೀಡರ್ ನಿರ್ಮಾಣವಾಗಲಿದ್ದು, 550 ಕೃಷಿ ಪಂಪ್ ಸೆಟ್ ಗಳಿಗೆ ನೀರು ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದರು.

ಯೂನಿಟ್‌ಗೆ 3.17 ರೂ. ನಿಗದಿ
”ಒಂದು ಮೆ.ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಗೆ 3.5 ಕೋಟಿ ರೂ.ನಿಂದ 4 ಕೋಟಿ ರೂ. ವೆಚ್ಚ ಆಗುತ್ತದೆ. ಈ ಪೈಕಿ 1 ಕೋಟಿ ರೂ. ಕೇಂದ್ರ ಸರಕಾರದಿಂದ ಸಬ್ಸಿಡಿ ಬರುತ್ತದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಪ್ರತಿ ಯೂನಿಟ್ ವಿದ್ಯುತ್‌ಗೆ ಗರಿಷ್ಠ 3.17 ರೂ. ನಿಗದಿಪಡಿಸಿದೆ,” ಎಂದು ಹೆಸ್ಕಾಂ ಅಧ್ಯಕ್ಷ ಸೈಯದ ಅಜ್ಜಮಪೀರ್ ಖಾದ್ರಿ ಮಾಹಿತಿ ನೀಡಿದರು.
ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್ ಉಪ ಕೇಂದ್ರಗಳ ಬಳಿ ಸೌರ ಘಟಕಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ಖಾಸಗಿಯವರು ಸೌರ ಘಟಕಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸುತ್ತಾರೆ. ಅದನ್ನು ಸರಕಾರ ಖರೀದಿಸಿ ಆಯಾ ಫೀಡರ್‌ಗಳ ವ್ಯಾಪ್ತಿಯ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುತ್ತದೆ. ಹಗಲು ವೇಳೆಯಲ್ಲಿ ಸೌರ ವಿದ್ಯುತ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಲಭ್ಯವಾಗಲಿದೆ,” ಎಂದು ವಿವರಿಸಿದರು.

