ನರೇಗಲ್ಲ: ನಿಸರ್ಗವು ಮನುಷ್ಯನಿಗೆ ಎಲ್ಲವನ್ನೂ ಕೊಟ್ಟಿದೆ. ಅದರಿಂದ ಆತ ಪಾಠ ಕಲಿಯಬೇಕು. ಇದೊಂದು ಶಾಲೆಯಾಗಿದ್ದು ಇಲ್ಲಿ ಯಾವುದೇ ಫೀ, ಡೊನೇಷನ್ ಇಲ್ಲ. ನಿಸರ್ಗದಿಂದ ಪುಕ್ಕಟೆಯಾಗಿ ಪಾಠ ಕಲಿಯುವ ಮನುಷ್ಯ ಬದುಕು ಕಟ್ಟಿಕೊಳ್ಳುತ್ತಾನೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಸರಕಾರಿ ಶಾಲೆ ಮೈದಾನದಲ್ಲಿ ಜರುಗಿದ ಸೈಬರ್‌ಟೆಕ್ ಕಂಪ್ಯೂಟರ್‌ನ ರಜತ ಮಹೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂತೋಷವಾಗಿದ್ದರೆ, ಮನುಷ್ಯನ 10 ಬೆರಳು ಚಪ್ಪಾಳೆ ತಟ್ಟುತ್ತವೆ. ದುಃಖದಲ್ಲಿದ್ದರೆ ಕೇವಲ 2 ಬೆರಳು ಮಾತ್ರ ಕಣ್ಣೀರು ಒರೆಸುತ್ತವೆ ಆದ್ದರಿಂದ ನಾವು ದುಃಖದಲ್ಲಿದ್ದಾಗ ಯಾರು ಬರಲಿಲ್ಲವೆಂದು ಬಯಸುವುದು ನಮ್ಮದೆ ತಪ್ಪಾಗುತ್ತದೆ. ಆದ್ದರಿಂದ ಒಳ್ಳೆಯದನ್ನು ಕಲಿಯುವುದು, ಕಲಿಸುವುದನ್ನು ರೂಢಿಯಲ್ಲಿಟ್ಟುಕೊಂಡರೆ ಯಾವಾಗಲೂ ಸಂತೋಷವಾಗಿ ಇರಬಹುದು ಎಂದರು.
ಒಂದು ಸಂಸ್ಥೆ 25 ವರ್ಷಗಳನ್ನು ಪೂರೈಸುವುದು ಅಷ್ಟು ಸುಲಭದ ಮಾತಲ್ಲ. ಸೈಬರ್‌ಟೆಕ್ ಸಂಸ್ಥೆ ಇಂದು ರಜತಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ನನಗೂ ಸಂತೋಷ ನೀಡಿದೆ. ಇಂದಿನ ದಿನಗಳಲ್ಲಿ ಎಲ್ಲವನ್ನೂ ಕಲಿತಿದ್ದರೂ ಕಂಪ್ಯೂಟರ್‌ನ ಜ್ಞಾನ ಬಹಳಷ್ಟು ಅವಶ್ಯವಿದೆ. ನಿಮಗೆ ಅದನ್ನು ಕಲಿಸಲೆಂದು ಇರುವ ಈ ಸಂಸ್ಥೆಯ ಉಪಯೋಗವನ್ನು ನೀವುಗಳು ಪಡೆದುಕೊಳ್ಳಿರಿ ಎಂದರು.
ಸಾನಿಧ್ಯ ವಹಿಸಿದ್ದ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಕಂಪ್ಯೂಟರ್ ಜ್ಞಾನವಿಲ್ಲದವರನ್ನು ಅನಕ್ಷರಸ್ಥರಂತೆ ನೋಡುವ ಪರಿಸ್ಥಿತಿ ಬಂದಿದೆ. ಹೀಗಾಗಿ ಇಂದಿನ ಸ್ಪರ್ಧಾತ್ಮಕ, ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ ಎಂದರು. ತಂತ್ರಜ್ಞಾನವು ಮನುಕುಲಕ್ಕೆ ವರವೂ ಆಗಿದೆ ಶಾಪವೂ ಆಗಿದೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಕಲಿಯದ ಮನುಷ್ಯ ಯಾವುದಕ್ಕೂ ಉಪಯೋಗವಿಲ್ಲ ಎನ್ನುವಂತಾಗಿದ್ದಾನೆ. ನೀವುಗಳೆಲ್ಲರೂ ಈ ಜ್ಞಾನವನ್ನು ಬೆಳೆಸಿಕೊಳ್ಳಿರಿ ಎಂದರು.
ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನಲ್ಲಿ ಎಷ್ಟೊಂದು ಅದ್ಭುತ್ ಶಕ್ತಿಯಿದೆ ಎನ್ನುವುದಕ್ಕೆ ಕಂಪ್ಯೂಟರ್ ಅನ್ವೇಷಣೆ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದಲ್ಲಿ 25 ವರ್ಷದ ನಿರಂತರ ತರಬೇತಿ ಒಳ್ಳೆಯ ಪರಿಣಾಮ ಬೀರಿದೆ ಎಂದರು.
ಈ ಸಂದರ್ಭದಲ್ಲಿ ಹಾಲಕೆರೆ ಮಠದ ಲಿಂಗಕ್ಯ ಅಭಿನವ ಅನ್ನದಾನ ಸ್ವಾಮೀಜಿಯವರ ಪುತ್ಥಳಿ ತುಲಾಭಾರ ಕಾರ್ಯಕ್ರಮ ಹಾಗೂ ಸೈಬರ್ ಟೆಕ್ ಸಂಸ್ಥೆಯ ಹಳೇ ವಿದ್ಯಾರ್ಥಿಗಳಿಂದ ಅನ್ನದಾನೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ವೈ. ಸಿ. ಪಾಟೀಲರ ಗುರುವಂದನ ಕಾರ್ಯಕ್ರಮ ನಡೆದವು. ನಂತರ ಜನಪದ ಕಲಾ ಸಂಭ್ರಮ ಕಾರ್ಯಕ್ರಮ ನಡೆಯಿತು.
ಈ ವೇಳೆ ನರೇಗಲ್‌ನ ಹಜರತ್ ರಹಿಮಾನ ಶ್ಯಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಶರಣರು, ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಹಿರಿಯ ವೈದ್ಯರಾದ ಡಾ. ಜಿ. ಕೆ. ಕಾಳೆ, ಡಾ. ಕೆ. ಬಿ. ಧನ್ನೂರ, ಪಟ್ಟಣ ಪಂಚಾಯತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಪ್ರಾಚಾರ್ಯರಾದ ಎಸ್. ಎಲ್. ಗುಳೇದಗುಡ್ಡ, ವೈ. ಸಿ. ಪಾಟೀಲ, ಮುಖಂಡರಾದ ಮುತ್ತಣ್ಣ ತೋಟಪ್ಪ ಕಡಗದ, ಸಿದ್ದಣ್ಣ ಬಂಡಿ, ವಿರೂಪಾಕ್ಷ ಸಂಗನಾಳ, ನಂದೀಶ ಅಚ್ಚಿ, ಬಸವರಾಜ ಮಡಿವಾಳರ ಇದ್ದರು.
—
ನರೇಗಲ್ ಪಟ್ಟಣದಲ್ಲಿ ಬುಧವಾರ ನಡೆದ ಸೈಬರ್ ಟೆಕ್ ಕಂಪ್ಯೂಟರ್ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಹಾಲಕೆರೆ ಮಠದ ಲಿಂಗಕ್ಯ ಅಭಿನವ ಅನ್ನದಾನ ಸ್ವಾಮೀಜಿಯವರ ಪುತ್ಥಳಿ ತುಲಾಭಾರ ನಡೆಯಿತು
ನರೇಗಲ್ ಪಟ್ಟಣದಲ್ಲಿ ಬುಧವಾರ ನಡೆದ ಸೈಬರ್ ಟೆಕ್ ಕಂಪ್ಯೂಟರ್ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಳೇ ವಿದ್ಯಾರ್ಥಿಗಳಿಂದ ಅನ್ನದಾನೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ವೈ. ಸಿ. ಪಾಟೀಲರ ಗುರುವಂದನ ಕಾರ್ಯಕ್ರಮ ನಡೆಯಿತು
ನರೇಗಲ್ ಪಟ್ಟಣದಲ್ಲಿ ಬುಧವಾರ ನಡೆದ ಸೈಬರ್ ಟೆಕ್ ಕಂಪ್ಯೂಟರ್ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು
