ಗದಗ: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಯೋಗ ಅತ್ಯಂತ ಅವಶ್ಯಕವಾಗಿದ್ದು, ಎಲ್ಲರೂ ನಿತ್ಯ ಯೋಗ ಮಾಡಬೇಕೆಂದು ಗ್ರಾಪಂ ನೂತನ ಅಧ್ಯಕ್ಷೆ ಪವಿತ್ರ ಪ್ರಲ್ಹಾದ ಹೊಸಳ್ಳಿ ಹೇಳಿದರು.
ಅವರು ತಾಲೂಕಿನ ಅಡವಿಸೋಮಾಪೂರ ಗ್ರಾಮ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಯೋಗಪಾಠ ಶಾಲೆಯ ಸುವರ್ಣ ಮಹೋತ್ಸವ ಪ್ರಯುಕ್ತ ಎಸ್.ವಾಯ್. ಬಿ.ಎಂ.ಎಸ್ ಯೋಗ ಪಾಠಶಾಲೆ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರ, (ಆಯುಷ್) ಪಾಪನಾಶಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ಯೋಗ ತರಬೇತಿ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ನಿತ್ಯ ಬೆಳಿಗ್ಗೆ ಬೇಗ ಎದ್ದು ಯೋಗ, ವ್ಯಾಯಾಮ ಹಾಗೂ ಉತ್ತಮ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೇಯದು. ಚಿಕ್ಕ ವಯಸ್ಸಿನಲ್ಲಿ ಮಾರಣಾಂತಿಕ ಕಾಯಲೆಗಳು ಬರದಂತೆ ನಾವೆಲ್ಲ ಎಚ್ಚರಿಕೆಯಿಂದ ಇರಬೇಕು. “ಸದೃಢವಾದ ದೇಹದಲ್ಲಿ ಸದೃಡವಾದ ಮನಸ್ಸು ಇರುತ್ತದೆ” ಎನ್ನುವಂತೆ ತಮ್ಮ ಆರೋಗ್ಯವನ್ನು ಚನ್ನಾಗಿ ಕಾಪಾಡಿಕೊಂಡು ದೀರ್ಘಾಯುಷಿಗಳಾಗಬೇಕೆಂದು ಸಲಹೆ ನೀಡಿದರು.
ಬಸವ ಯೋಗ ಕೇಂದ್ರ ಪ್ರಾ. ಕೆ.ಎಸ್. ಪಲ್ಲೇದ ಮಾತನಾಡಿ ಯೋಗ ಪದ್ದತಿ ದೇಶದ ಆಸ್ತಿಯಾಗಿದ್ದು, ಅಂತರಾಷ್ಟ್ರೀಯ ಖ್ಯಾತಿ ಪಡೆದುಕೊಂಡಿದೆ. ಯೋಗಾಬ್ಯಾಸ ಆರೋಗ್ಯಕರ ಜೀವನ್ನು ಸಾಗಿಸಬಹುದು. ಯೋಗದ ಮಹತ್ತವನ್ನು ತಿಳಿಸಿ, ಯೋಗದಿಂದ ಹತ್ತು ಹಲವಾರು ಪ್ರಯೋಜನಗಳಿದ್ದು, ಶಿಸ್ತುನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ವೈದ್ಯಾಧಿಕಾರಿ ಅಶೋಕ ಮತ್ತಿಕಟ್ಟಿ ಮಾತನಾಡಿ ಇಂದಿನಿಂದ ಆರು ದಿನಗಳ ಕಾಲ ನಿತ್ಯ ಯೋಗ ಶಿಬಿರ ಜರುಗುತ್ತಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸದೂಪಯೋಗ ಮಾಡಿಕೊಳ್ಳಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಗ್ರಾಪಂ ಸದಸ್ಯೆ ಬಸಮ್ಮ ಪುರದ, ಯೋಗ ಶಿಕ್ಷಕಿ ಸುಧಾ ಪಾಟೀಲ, ಗ್ರಾಪಂ ಸಿಬ್ಬಂದಿ ಮಹಾಂತೇಶ ದಡವಾಡ, ಹನಮಂತಪ್ಪ ಹೊಂಬಳ, ಮಂಜುನಾಥ ಮೇಗಲಮನಿ ಸೇರಿದಂತೆ ಮುಂತಾದವರು ಇದ್ದರು.
ಸದೃಢವಾದ ದೇಹದಲ್ಲಿ ಸದೃಡವಾದ ಮನಸ್ಸು ಇರುತ್ತದೆ: ಪವಿತ್ರ ಹೊಸಳ್ಳಿ
