ಪತ್ತನಂತಿಟ್ಟ(ಕೇರಳ): ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ಮಂಡಲ ಪೂಜೆ, ದರ್ಶನ ಆರಂಭವಾಗಿದ್ದು ಶುಕ್ರವಾರ ಸಂಜೆ 4 ಗಂಟೆಗೆ ದೇವಸ್ಥಾನದ ಅರ್ಚಕರಾದ ಕಂದರಾರು ರಾಜೀವ್ ಮತ್ತು ಕಂದರಾರು ಬ್ರಹ್ಮದತ್ತನ ಸಮ್ಮುಖದಲ್ಲಿ ಪ್ರಧಾನ ಅರ್ಚಕರಾದ ಪಿ.ಎನ್.ಮಹೇಶ್ ನಂಬೂತಿರಿ ಅವರು ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲು ತೆರೆದರು.
ಹೊಸದಾಗಿ ನೇಮಕಗೊಂಡಿರುವ ಪ್ರಧಾನ ಅರ್ಚಕರಾದ ಅರುಣ್ ಕುಮಾರ್ ನಂಬೂತಿರಿ ಮತ್ತು ವಾಸುದೇವನ್ ನಂಬೂತಿರಿ ಅವರು 18 ಮೆಟ್ಟಿಲುಗಳನ್ನು ಹತ್ತಿ ನಂತರ ಭಕ್ತರೂ 18 ಮೆಟ್ಟಿಲು ಹತ್ತಿ ಅಯ್ಯಪ್ಪನ ದರ್ಶನ ಪಡೆದರು.
ಶನಿವಾರ ದಿಂದ ನಿತ್ಯ 18 ಗಂಟೆ ಅಯ್ಯಪ್ಪ ದರ್ಶನಕ್ಕೆ ಅವಕಾಶ:
ಶನಿವಾರ ದಿಂದ ಪ್ರತಿದಿನ ದೇವಸ್ಥಾನ ಬಾಗಿಲನ್ನು ಬೆಳಗ್ಗೆ 3 ಗಂಟೆಗೆ ತೆರೆದು ಮಧ್ಯಾಹ್ನ 1 ಗಂಟೆಗೆ ಮುಚ್ಚಲಾಗುತ್ತದೆ, ನಂತರ ಮಧ್ಯಾಹ್ನ 3 ಗಂಟೆಗೆ ಮತ್ತೆ ಬಾಗಿಲು ತೆರೆದು, ರಾತ್ರಿ 11 ಗಂಟೆಗೆ ಮುಚ್ಚಲಾಗುತ್ತದೆ. ಬೆಳಗ್ಗೆ 3.30ಕ್ಕೆ ತುಪ್ಪದ ಅಭಿಷೇಕ ಆರಂಭವಾಗಲಿದ್ದು, 7.30ಕ್ಕೆ ಬೆಳಗ್ಗೆ ಪೂಜೆ ಹಾಗೂ 12.30ಕ್ಕೆ ಮಧ್ಯಾಹ್ನದ ಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ದೀಪಾರಾಧನೆ ನಡೆಯಲಿದ್ದು, ರಾತ್ರಿ 9.30ಕ್ಕೆ ಕೊನೆಯ ಪೂಜೆ(ಅತ್ತಾಳ ಪೂಜೆ) 11 ಗಂಟೆಗೆ ನೆರವೇರಲಿದೆ ಒಟ್ಟು 18 ಗಂಟೆಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ಇರುತ್ತದೆ.
ಮಂಡಲ ಪೂಜೆಯನ್ನು ಡಿಸೆಂಬರ್ 26 ರಂದು ನಿಗದಿಪಡಿಸಲಾಗಿದ್ದು, ಅಂದು ರಾತ್ರಿ 10 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ನಂತರ ಡಿಸೆಂಬರ್ 30 ರಂದು ದೇವಸ್ಥಾನದ ಬಾಗಿಲು ತೆರೆಯಲಿದೆ. ಮುಂದಿನ ವರ್ಷ ಜನವರಿ 14 ರಂದು ಮಕರ ಜ್ಯೋತಿ ಕಾಣಲಿದೆ. ನಂತರ ಜನವರಿ 20ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ.
ಈ ಬಾರಿಯೂ ವರ್ಚುಯಲ್ ಕ್ಯೂ :
ದೇವಸ್ಥಾನ ಆಡಳಿತ ಮಂಡಳಿ ಈ ಬಾರಿ ಪ್ರತಿದಿನ 80 ಸಾವಿರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದೆ. 70 ಸಾವಿರ ವರ್ಚುಯಲ್ ಕ್ಯೂ ಬುಕಿಂಗ್ ಮತ್ತು 10 ಸಾವಿರ ಸ್ಪಾಟ್ ಬುಕಿಂಗ್ಗೆ ಅವಕಾಶವಿದ್ದು ದೇವರ ದರ್ಶನಕ್ಕೆ ದೇವಸ್ಥಾನ ಮಂಡಳಿ ಮತ್ತು ಕೇರಳ ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಮುಜರಾಯಿ ಸಚಿವ ವಿ.ಎನ್. ವಾಸವನ್ ಹೇಳಿದ್ದಾರೆ. ಪಂಪಾದಲ್ಲಿ ನೂತನವಾಗಿ ನಿರ್ಮಿಸಿರುವ ಶಬರಿ ಅತಿಥಿ ಗೃಹ ಹಾಗೂ ಆಧುನಿಕ ಸೌಲಭ್ಯಗಳಿಂದ ಕೂಡಿರುವ ವಿಘ್ನೇಶ್ವರ ಅತಿಥಿ ಗೃಹವನ್ನು ಸಚಿವರು ಉದ್ಘಾಟಿಸಿ ಹೇಳಿದರು.
ನಿಲಕ್ಕಲ್ ದಲ್ಲಿ ಪಾರ್ಕಿಂಗ್:
ಈ ಬಾರಿ ನಿಲಕ್ಕಲ್ನಲ್ಲಿ 8 ಸಾವಿರದಿಂದ 10 ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ನಿಲಕ್ಕಲ್ನಲ್ಲಿ 17,000 ಚದರ ಅಡಿ ಟೆಂಟ್ ಹಾಕಲಾಗಿದ್ದು, 2,700 ಜನ ಇಲ್ಲಿ ವಿಶ್ರಾಂತಿ ಪಡೆಯಬಹುದು. ನಿಲಕ್ಕಲ್, ಪಂಪಾದಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಶಬರಿಮಲೆ ಹತ್ತುವ ಭಕ್ತರಿಗೆ ನೀರು ಮತ್ತು ತಿಂಡಿ ವಿತರಿಸಲಾಗುತ್ತದೆ, ಮರಕ್ಕೂಟಂನಿಂದ ಬೆಟ್ಟ ಹತ್ತುವ ಭಕ್ತರು ಕುಳಿತು ವಿಶ್ರಾಂತಿ ಪಡೆಯಲು ಸಾವಿರ ಸ್ಟೀಲ್ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 132 ಕೇಂದ್ರಗಳಲ್ಲಿ ವಿಶ್ರಾಂತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.