ಪಹಣಿ ಪತ್ರದಲ್ಲಿ ವಕ್ಫ ಹೆಸರು ರದ್ದತಿಗೆ ಆದೇಶ ಸಿಹಿ ಹಂಚಿ ಸಂಭ್ರಮಿಸಿದ ರೈತ ಮುಖಂಡರು

ಸಮಗ್ರ ಪ್ರಭ ಸುದ್ದಿ
1 Min Read

ನವಲಗುಂದ: ರೈತರ ಮಾಲ್ಕಿ ವಹಿವಾಟಿನಲ್ಲಿರುವಂತಹ ಕೃಷಿ ಸಾಗುವಳಿ ಪಹಣಿ ಪತ್ರದಲ್ಲಿ ಅನಧಿಕೃತ ವಕ್ಫ ಹೆಸರು ರದ್ಧತಿ ಹಾಗೂ ರೈತರಿಗೆ ನೀಡಿರುವಂತಹ ನೋಟಿಸ್ ವಾಪಸ್ ಪಡೆಯಲು ಆದೇಶಿಸಿದ ಮುಖ್ಯಮಂತ್ರಿಗಳಿಗೆ ರೈತ ಮುಖಂಡ ಮಾಬುಸಾಬ ಯರಗುಪ್ಪಿ ಧನ್ಯವಾದ ತಿಳಿಸಿದ್ದಾರೆ.

ಈ ಕುರಿತು ಸಿಹಿ ಹಂಚಿ ಸಂಭ್ರಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಕ್ಫ ಆಸ್ತಿ ಅಂತಾ ರೈತರ ಕೃಷಿ ಭೂಮಿಯ ಉತಾರದಲ್ಲಿ ಹೆಸರು ನಮೂದಾಗಿದ್ದು ರಾಜ್ಯಾದ್ಯಂತ ರೈತಕುಲದ ಆಕ್ರೋಶಕ್ಕೆ ಕಾರಣವಾಗಿತ್ತು, ಈ ಕುರಿತು ನಾವು ಕೂಡಾ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದ್ದು ರೈತರ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿಗಳು ಶನಿವಾರ ವಕ್ಫ ಆಸ್ತಿಗೆ ಸಂಬಂಧಿಸಿದಂತೆ ರೈತರಿಗೆ ನೀಡಿರುವಂತಹ ನೋಟಿಸ್ ವಾಪಸ್ ಪಡೆಯುವದರೊಂದಿಗೆ ರೈತರ ಪಹಣಿ ಪತ್ರದಲ್ಲಿ ನಮೂದಾಗಿರುವಂತಹ ವಕ್ಫ ಮಂಡಳಿ ಹೆಸರನ್ನು ರದ್ದು ಮಾಡಲು ಆದೇಶ ಮಾಡಿದ್ದು ಇದು ರೈತಕುಲದ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು.

ರೈತ ಬಶೀರಅಹ್ಮದ ಹುನಗುಂದ ಮಾತನಾಡಿ ನಮ್ಮ ಪಿತ್ರಾರ್ಜಿತ ಆಸ್ತಿಯ ಪಹಣಿಯಲ್ಲಿ ವಕ್ಫ ಬೋರ್ಡನವರು 2017-18ರಲ್ಲಿ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ಅನಧಿಕೃತವಾಗಿ ಹೆಸರು ನಮೂದ ಮಾಡಿದ್ದು ಈ ಕುರಿತು ರೈತರ ನೇತೃತ್ವದಲ್ಲಿ ಮೊನ್ನೆಯ ದಿನ ಮನವಿ ನೀಡಿದ್ದೆವು, ಅದಕ್ಕೆ ಸ್ಪಂದಿಸಿದ ಸರ್ಕಾರ ಪಹಣಿಯಲ್ಲಿನ ವಕ್ಫ ಹೆಸರು ರದ್ದು ಮಾಡಲು ಆದೇಶಿಸಿದ್ದು ಸ್ವಾಗತಾರ್ಹ, ಸರ್ಕಾರಕ್ಕೆ ರೈತರ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮರಿತಮ್ಮೆಪ್ಪ ಹಳ್ಳದ, ಈರಣ್ಣ ಪೂಜಾರ, ಮಾಬುಸಾಬ ಕೆರೂರ, ಲವ ಭೋವಿ, ಜಾವಿದ ಪಟವೆಗಾರ, ಸಿದ್ಧಿಸಾಬ ಟಕ್ಕೆದ, ರಾಜು ಗದಗಿನ ಉಪಸ್ಥಿತರಿದ್ದರು.

Share this Article