ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಹಶೀಲ್ದಾರ್ ಜಿ. ಬಿ. ಚಿಕ್ಕನಗೌಡರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ನಲ್ಲಿ ಶವ ಪತ್ತೆಯಾಗಿದೆ. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಯ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ಸಿಗುತ್ತದೆ. ಈ ಕುರಿತು ಕುಟುಂಬ ಸದಸ್ಯರಿಗೂ ಮಾಹಿತಿಯನ್ನು ನೀಡಲಾಗಿದ್ದು.
54 ವರ್ಷದ ಜಿ. ಬಿ. ಚಿಕ್ಕನಗೌಡರ್ ಮೂಲತಃ ಗದಗ ಜಿಲ್ಲೆಯವರಾಗಿದ್ದು ಜಿಲ್ಲೆಯ ರೋಣ,ಗದಗ ತಾಲೂಕಿನಲ್ಲಿ ತಹಶೀಲ್ದಾರ ಆಗಿ ಕಾರ್ಯನಿರ್ವಹಿಸಿದ್ದರು ನಂತರ ಬೆಳಗಾವಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ನ್ಯಾಯಾಲಯದ ಕೆಲಸಕ್ಕಾಗಿ ಅವರು ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಆಗಮಿಸಿ ನರ್ತಕಿ ಚಿತ್ರಮಂದಿರದ ಸಮೀಪದ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದರು.
ಬುಧವಾರ ರಾತ್ರಿ ಲಾಡ್ಜ್‌ನ ಕೊಠಡಿಯಲ್ಲಿ ಜಿ. ಬಿ. ಚಿಕ್ಕನಗೌಡರ್ ಶವ ಪತ್ತೆಯಾಗಿದೆ. ಹೃದಯಾಘಾತದಿಂದ ಅವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರ ತನಿಖೆ ಮುಂದುವರೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಗುರುವಾರ ಹಸ್ತಾಂತರ ಮಾಡಲಾಗುತ್ತದೆ.
ಇವರ ನಿಧನಕ್ಕೆ ಗದಗ ಜಿಲ್ಲೆಯ ಕಂದಾಯ ಅಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ