ಬೆಂಗಳೂರು: ಕಳೆದ ಆರು ದಿನಗಳಿಂದ ನಡೆಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿರುವ ಗ್ರಾಮ ಪಂಚಾಯತಿ ನೌಕರರ ಒಕ್ಕೂಟ, ಎಂದಿನಂತೆ ಕಚೇರಿಗೆ ಮರಳುವುದಾಗಿ ಗುರುವಾರ ಘೋಷಿಸಿದೆ.
ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೌಕರರ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ಸದಸ್ಯರಿದ್ದ 300ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಸುದೀರ್ಘ ಮೂರು ಗಂಟೆ ಕಾಲ ನಡೆದ ಸಭೆಯಲ್ಲಿ ಸಚಿವರು ನೌಕರರ 75 ಬೇಡಿಕೆಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಒಕ್ಕೂಟದ ರಾಜ್ಯಾಧ್ಯಕ್ಷ ರಾಜು ವಾರದ ಮುಷ್ಕರ ಹಿಂಪಡೆಯುವುದಾಗಿ ಘೋಷಿಸಿದರು.
ಇದೇ ವೇಳೆ ಸಚಿವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಬಡ್ತಿ ಹಾಗೂ ಇತರೆ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸುವುದಾಗಿ ಪ್ರಕಟಸಿದ್ದು, ಮೂರು ತಿಂಗಳೊಳಗೆ ಸಮಿತಿ ವರದಿ ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ಹಿತಾಸಕ್ತಿಗಳಿಗಾಗಿ ಹೋರಾಟ ಮಾಡುವುದು ಎಷ್ಟು ಮುಖ್ಯವೋ, ಸಾರ್ವಜನಿಕ ಸೇವೆಯ ಮೂಲಕ ಗ್ರಾಮೀಣ ಜನರ ಹಿತಾಸಕ್ತಿಗಳನ್ನು ಕಾಪಾಡಲು ಅಷ್ಟೇ ಬದ್ಧತೆ ಹೊಂದಿರಬೇಕು ಎಂದು ಇದೇ ವೇಳೆ ಬುದ್ಧಿಮಾತು ಹೇಳಿದರು.
ಈ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹಾದೇವನ್, ಅಂಜುಂ ಪರ್ವೇಜ್ ಹಾಗೂ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಹಾಜರಿದ್ದರು.