ಮುಂಡರಗಿಯಲ್ಲಿ ಅದ್ಧೂರಿ ಮೆರವಣಿಗೆ: ಮೃಡಗಿರಿಯ ನಾಡೋತ್ಸವ

ಸಮಗ್ರ ಪ್ರಭ ಸುದ್ದಿ
1 Min Read

ಗದಗ:  ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಜರುಗುತ್ತಿರುವ ಹಾನಗಲ್ಲ ಗುರು ಕುಮಾರ ಮಹಾಶಿವಯೋಗಿಗಳ 157 ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ನಾಳೆ ತೆರೆ ಬೀಳಲಿದೆ.

ಶ್ರೀಮಠದ ಆವರಣದಲ್ಲಿ ಸಮಾರೋಪ ಸಮಾರಂಭ ಜರುಗುತ್ತಿದ್ದು, ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕುಮಾರೇಶ್ವರರ ಭಾವಚಿತ್ರದೊಂದಿಗೆ, ನೂರಾರು ಮಠಾಧೀಶರ ನೇತೃತ್ವದಲ್ಲಿ ಅದ್ಧೂರಿ ಮೆರವಣಿಗೆ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಸುಮಂಗಲೆಯರ ಕುಂಭೋತ್ಸವ, ವಿಶಿಷ್ಟ ವಾದ್ಯಮೇಳ, ಹತ್ತಾರು ಹಳ್ಳಿಗಳ ಭಜನಾ ಸಂಘಗಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕುರಿತು ಮಾತನಾಡಿದ, ಶ್ರೀಮಠದ ಉತ್ತರಾಧಿಕಾರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಹತ್ತು ದಿನಗಳ ಕಾಲ ನಡೆದ ಕಾರ್ಯಕ್ರಮಗಳನ್ನ ಮುಂಡರಗಿ ತಾಲೂಕಿನ ಭಕ್ತರು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ್ದಾರೆ.‌ಅದೇ ರೀತಿ ನಾಳೆಯೂ ಸಹ ನ ಭೂತೋ, ನ ಭವಿಷ್ಯತಿ ಅನ್ನುವಂತೆ ಸಮಾರಂಭ ಜರುಗಲಿದ್ದು, ಎಲ್ಲ ಸರ್ವಧರ್ಮದ ಸಮಸ್ತ ಬಂಧುಗಳು‌ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ, ಕುಮಾರೇಶ್ವರರ ಜಯಂತಿಯನ್ನ, ಮುಂಡರಗಿಯ ನಾಡೋತ್ಸವ ಆಗುವಂತೆ ಮಾಡಬೇಕು ಎಂದು ತಿಳಿಸಿದರು.

ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಮೆರವಣಿಗೆ, ಪಟ್ಟಣದ ಮುಖ್ಯ ಬಜಾರ್, ಸಿದ್ದಪ್ಪ ಕಂಬಳಿ ವೃತ್ತ, ಕಿತ್ತೂರ ಚೆನ್ನಮ್ಮ ವೃತ್ತ, ಕೊಪ್ಪಳ ಸರ್ಕಲ್, ಭಜಂತ್ರಿ ಓಣಿ, ಬೃಂದಾವನ ಸರ್ಕಲ್, ಹೆಸರೂರು ಕ್ರಾಸ್, ಬಸ್ ನಿಲ್ದಾಣ ರಸ್ತೆ, ಅಂಬಾಭವಾನಿ ದೇವಸ್ಥಾನ ರಸ್ತೆ,ಹಾಗೂ ಕನ್ನಿಕಾಪರಮೇಶ್ವರಿ ದೇವಸ್ಥಾನ ರಸ್ತೆ ಮೂಲಕ ಮರಳಿ ಮಠಕ್ಕೆ ಆಗಮಿಸಲಿದೆ.‌ ನಂತರ ಸಮಾರೋಪ‌ ಸಮಾರಂಭದ ವೇದಿಕೆ ಕಾರ್ಯಕ್ರಮ ಜರುಗಲಿದ್ದು,‌ ನಂತರ ಮಹಾದಾಸೋಹ ಜರುಗಲಿದೆ, ಹೀಗಾಗಿ ತಾಲೂಕಿನ ಎಲ್ಲ ಜನತೆ, ಯಾವುದೇ ಜಾತಿ,‌ಮತ, ಪಂಥ ಎನ್ನದೇ ನಾಳೆಯ ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಶ್ರೀಗಳು ತಿಳಿಸಿದರು.

Share this Article