ಗಜೇಂದ್ರಗಡ: ಯಾವ ದೇಶ ಗುಣಮಟ್ಟದ ಶಿಕ್ಷಣ ಹೊಂದಿರುತ್ತದೋ, ಆ ದೇಶ ಮಾತ್ರ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ಭಾರತ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಪಿಯು ಕಾಲೇಜಿನ ಪ್ರಾಚಾರ್ಯ ವಸಂತರಾವ್ ಗಾರಗಿ ಹೇಳಿದರು.
ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಗುರುವಾರ ಮಧ್ಯಾಹ್ನ ನಡೆದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಿಗೆ ಸರಿಸಮಾನ ಹುದ್ದೆ ಯಾವುದೂ ಇಲ್ಲ. ಅತ್ಯಂತ ಶ್ರೇಷ್ಠ ಸ್ಥಾನ ಅವರದ್ದಾಗಿದೆ. ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಜ್ಞಾನ ಸಂಪತ್ತನ್ನು ಪಡೆದು ಉತ್ತಮ ನಾಗರಿಕರಾಗಬೇಕು. ಪ್ರತಿ ವರ್ಷ ಮಕ್ಕಳು ಆಯೋಜನೆ ಮಾಡುವ ಶಿಕ್ಷಕರ ದಿನಾಚರಣೆಯು ನಮ್ಮ ಜವಾಬ್ದಾರಿಯನ್ನು ಹೆಚ್ಚಾಗುತ್ತದೆ ಎಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಬಸಯ್ಯ ಹಿರೇಮಠ ಮಾತನಾಡಿ, ಹಿಂದಿನ ಕಾಲದಲ್ಲಿದ್ದ ಗುರು ಶಿಷ್ಯರ ಪರಂಪರೆ ಇನ್ನೂ ಜೀವಂತ ಇರುವುದಕ್ಕೆ ಸಂತಸ ವ್ಯಕ್ತಪಡಿಸಿ, ಯಾವುದೇ ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರಲು ಗುರುಗಳ ಮಾರ್ಗದರ್ಶನ ಖಂಡಿತವಾಗಿ ಅಗತ್ಯವಾಗಿದೆ. ಒಳ್ಳೆಯ ಸಮಾಜ ಕಟ್ಟುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು. ತಾಯಿ ಮೊದಲ ಗುರುವಾದರೆ ನಂತರದಲ್ಲಿ ಶಿಕ್ಷಕರು ಗುರುವಾಗಿ ಜೀವನದ ವ್ಯಕ್ತಿತ್ವವನ್ನು ರೂಪಿಸುವ ಕೆಲಸ ಮಾಡುತ್ತಾರೆ. ಗುರು ಕೊಟ್ಟ ಜ್ಞಾನ ಜೀವನಾಂತ್ಯವರೆಗೆ ಇರುತ್ತದೆ. ಶಿಕ್ಷಕರಿಲ್ಲದ ವಿದ್ಯಾರ್ಥಿ ಜೀವನ ರೆಕ್ಕೆ ಇಲ್ಲದ ಹಕ್ಕಿಯಂತೆ. ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಅವಿನಭಾವ ಸಂಬಂಧವಿದೆ ಎಂದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಗೋಪಾಲ ರಾಯಬಾಗಿ ಮಾತನಾಡಿ, ಉತ್ತಮ ಸಮಾಜಕ್ಕೆ ಶಿಕ್ಷಕರ ಅವಶ್ಯಕತೆಯಿದೆ. ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ. ಸೂರ್ಯನ ಬೆಳಕಿನ ಶಕ್ತಿಗಿಂತ ಶಿಕ್ಷಕ ನೀಡುವ ಜ್ಞಾನದ ಬೆಳಕಿನ ಶಕ್ತಿ ಶ್ರೇಷ್ಠವಾಗಿದೆ. ಸೂರ್ಯ ಬೆಳಕು ಕೆಲ ಸಮಯದಲ್ಲಿ ಮಾತ್ರ ನೀಡಿದರೆ ಶಿಕ್ಷಕರು ನೀಡಿದ ಜ್ಞಾನ ಜೀವನದ ಅಂತ್ಯದವರೆಗೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ವಿದ್ಯಾರ್ಥಿಗಳು, ಉಪನ್ಯಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಕ್ಕಳು ಉಪನ್ಯಾಸಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿದರು. ವಿದ್ಯಾರ್ಥಿಗಳು ಎಲ್ಲಾ ಉಪನ್ಯಾಸಕರಿಗೆ, ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಸಂಗಮೇಶ ವಸ್ತ್ರದ, ಪ್ರತಿಭಾ ಲಕ್ಷಕೊಪ್ಪದ, ಸಂಗೀತಾ ನಾಲತವಾಡ, ರವಿ ಹಲಗಿ, ಪ್ರೀತಿ ಹೊಂಬಳ, ಎ. ಡಿ. ಜಾತಗೇರ, ಮಂಜುನಾಥ ಕಮ್ಮಾರ, ಗಿರೀಶ ವೀರಘಂಟಿ, ಆರ್. ಪಿ. ಹೊಳಗಿ, ಯಶ್ವಂತ, ಶಬನಾಬೇಗಂ, ಈರಣ್ಣ ಹಡಪದ, ಪ್ರಮೋದ ಅಬ್ಬಿಗೇರಿ ಇದ್ದರು.