ನರೇಗಾ ಸಹಾಯಧನ:ಕೈ ಹಿಡಿದ ಕರಿಬೇವು ಬೆಳೆ

ಸಮಗ್ರ ಪ್ರಭ ಸುದ್ದಿ
1 Min Read

ಮುಂಡರಗಿ : ತಾಲೂಕಿನ ಮೇವುಂಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಬರದೂರ ಗ್ರಾಮದ ರೈತ ಮೈಲೆಪ್ಪ ತಳಗೇರಿ ಕರಿವೇವು ಬೆಳೆಯುವ ಮೂಲಕ ಆರ್ಥಿಕ ಸ್ವಾವಲಂಬನೆ ಕಂಡುಕೊಂಡಿದ್ದಾರೆ. ಈ ಮೊದಲು ಮೈಲೆಪ್ಪ ತಮ್ಮ ಒಂದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ಜೋಳ, ಹೆಸರು ಬೆಳೆ ಬೆಳೆಯುತ್ತಿದ್ದರು. ಆದರೆ ಇತ್ತೀಚೆಗೆ ನರೇಗಾ ಯೋಜನೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಇರುವ ಸೌಲಭ್ಯ ತಿಳಿದು ಕರಿಬೇವು ಬೆಳೆಯಲು ನಿರ್ಧರಿಸಿದರು. 2023-24ನೇ ಸಾಲಿನಲ್ಲಿ 1.20 ಲಕ್ಷ ಸಹಾಯಧನ ಪಡೆದು 800 ಕರಿಬೇವು ಸಸಿ ತಂದು ನೆಟ್ಟರು. ಆ ಮೂಲಕ ಕೇವಲ ಕೆಲವೇ ತಿಂಗಳುಗಳಲ್ಲಿ ಕರಿಬೇವು ಆದಾಯ ನೀಡುತ್ತಿದ್ದು, ಈಗ ಮೈಲೆಪ್ಪ ವಾರ್ಷಿಕವಾಗಿ ಐವತ್ತರಿಂದ ಅರವತ್ತು ಸಾವಿರ ಲಾಭದ ನಿರೀಕ್ಷೆಯಲ್ಲಿದ್ದಾರೆ. ಕರಿಬೇವು ಸಸಿ ಬೆಳೆದಂತೆ ಇಳುವರಿಯು ಅಧಿಕವಾಗಲಿದ್ದು, ಆದಾಯ ಕೂಡ ಹೆಚ್ಚಾಗಲಿದೆ. ಇದರೊಂದಿಗೆ ವಾಣಿಜ್ಯ ಬೆಳೆಗಳ ಆದಾಯ ಸಹ ಪ್ರತ್ಯೇಕವಾಗಿ ಕೈ ಸೇರಲಿದ್ದು ನರೇಗಾ ಯೋಜನೆಯ ಸದ್ಬಳಕೆಯಿಂದ ಮಿಶ್ರ ಬೇಸಾಯದ ಮಹತ್ವವನ್ನು ರೈತ ಮೈಲೆಪ್ಪ ಎತ್ತಿ ಹಿಡಿದಿದ್ದಾರೆ. ಈಗಾಗಲೇ ತಾಲೂಕು ಹಾಗೂ ಜಿಲ್ಲಾ ಮಾರುಕಟ್ಟೆಗೆ ಕರಿಬೇವು ಹೋಗಿದ್ದು ಕೆಜಿಗೆ 30ರೂಪಾಯಿ ದರದಲ್ಲಿ ಮಾರಾಟವಾಗಿದೆ. ಸೀಸನ್ ಗೆ ತಕ್ಕಂತೆ ದರ ಏರುಮುಖ ಆಗುವುದರಿಂದ ಮುಂಬರುವ ದಿನಗಳಲ್ಲಿ ಉತ್ತಮ ಆದಾಯ ನಿರೀಕ್ಷೆ ಮಾಡಬಹುದು ಎಂದು ಖುಷಿಯಿಂದ ಪ್ರತಿಕ್ರಿಯಿಸುತ್ತಾರೆ ರೈತ ಮೈಲೆಪ್ಪ ತಳಗೇರಿ.

ನರೇಗಾ ಯೋಜನೆ ಸದ್ಬಳಕೆ ಮೂಲಕ 2023-24ನೇ ಸಾಲಿನಲ್ಲಿ ಸಹಾಯಧನ ಪಡೆದು ರೈತ ಮೈಲೆಪ್ಪ ಉತ್ತಮ ಆದಾಯ ಕಂಡಿರುವುದು ಖುಷಿಯ ಸಂಗತಿ. ಇದು ನರೇಗಾ ಯೋಜನೆ ಸದುಪಯೋಗದ ಜೊತೆಗೆ ಮಿಶ್ರ ಬೇಸಾಯದ ಮಹತ್ವ ಸಾರುವ ಮೂಲಕ ರೈತರ ಉತ್ತಮ ಆರ್ಥಿಕತೆಗೆ ನಿದರ್ಶನವಾಗಿರುವುದು ಖುಷಿಯ ಸಂಗತಿ.
– ವಿಶ್ವನಾಥ ಹೊಸಮನಿ
ಕಾರ್ಯನಿರ್ವಾಹಕ ಅಧಿಕಾರಿಗಳು,
ತಾಪಂ, ಮುಂಡರಗಿ

Share this Article