ಬೆಂಗಳೂರು: ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿಧಾಮ ಗಡಿಯ 1 ಕಿಲೋ ಮೀಟರ್ ಫಾಸಲೆಯಲ್ಲಿ ಕಲ್ಲು, ಮರಳು ಗಣಿಗಾರಿಕೆ ನಿಷೇಧಿಸಿದ್ದ ಹಾಗೂ ಕ್ವಾರಿ ಗುತ್ತಿಗೆಗಳನ್ನು ಅಮಾನತುಪಡಿಸಿದ್ದ ಸರಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಅಲ್ಲದೆ, ಸರ್ಕಾರದ ನಿರ್ಧಾರ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸರಿಯಾಗಿಯೇ ಇದೆ, ಅದರಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರದ ಆದೇಶ ಪ್ರಶ್ನಿಸಿ ಎಸ್. ಆರ್. ಬೆಳ್ಳಾರಿ, ಎ. ಜೆ. ಕಳ್ಕೆರೆ ಹಾಗೂ ಶಿವಗಂಗಾ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್ ಸೇರಿ ಹಲವು ಗಣಿಗಾರಿಕೆ ಕಂಪನಿಗಳು ಹಾಗೂ ಅವುಗಳ ಮಾಲೀಕರು ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ ಅವರಿದ್ದ ವಿಭಾಗೀಯಪೀಠ ವಜಾಗೊಳಿಸಿದೆ.