ಗದಗ : ಭಾರತದಲ್ಲಿ ಪ್ರಜಾಪ್ರಭುತ್ವದ ಬುನಾದಿ ಮತದಾನ. ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಅದರಲ್ಲಿ ಭಾಗವಹಿಸುವ ಹಕ್ಕು ಮತ್ತು ಜವಾಬ್ದಾರಿ ಇದೆ. ನಾವು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸಲು ಸಕ್ರಿಯವಾಗಿ ಕೊಡುಗೆ ನೀಡಬಹುದು ಮತ್ತು ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಕರ್ತವ್ಯವನ್ನು ಪೂರೈಸಬಹುದು.
ಇದೇ ಮೇ 7 ರಂದು ಗದಗ ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅತೀವ ಆಸಕ್ತಿ ಉತ್ಸಾಹದಿಂದ ಮತದಾರರಾದ ತಾವೆಲ್ಲರು ಪಾಲ್ಗೊಳ್ಳುವ ಮೂಲಕ ಜಿಲ್ಲೆಯ ಮತದಾನದ ಪ್ರಮಾಣವನ್ನು ಅಧಿಕಗೊಳಿಸುವಲ್ಲಿ ತಾವುಗಳು ಪ್ರಮುಖ ಪಾತ್ರವಹಿಸಿದ್ದಿರಿ ತಮಗೆಲ್ಲ ಅಭಿನಂದನೆಗಳು. ಲೋಕಸಭಾ ಚುನಾವಣೆಯಲ್ಲಿ ಗದಗ ಜಿಲ್ಲೆಯ ಮತದಾರರೆಲ್ಲರು ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಮತ ಚಲಾಯಿಸಿದ್ದಿರಿ. ತಮಗೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯನ್ನು ಅತ್ಯಂತ ಶಾಂತಿಯುತ ಹಾಗೂ ಸುಗಮವಾಗಿ ನಡೆಸಲು ಸಹಕರಿಸಿದ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೆ, ಜನಪ್ರತಿನಿಧಿಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಂದಾಯ, ಜಿಲ್ಲಾ ಪಂಚಾಯತಿ ಹಾಗೂ ಪೊಲೀಸ್ ಸೇರಿದಂತೆ ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು/ಸಿಬ್ಬಂದಿ, ಸ್ವೀಪ್ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮತದಾನ ಹೆಚ್ಚಳಕ್ಕೆ ಕೈಜೋಡಿಸಿದ ಸಂಘ-ಸಂಸ್ಥೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮತದಾರರ ಶಿಕ್ಷಣ ಹಾಗೂ ಸಹಭಾಗಿತ್ವ ಕಾರ್ಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಕಾಲೇಜು ವಿಧ್ಯಾರ್ಥಿಗಳು ಪಾಲ್ಗೊಂಡು ಜಿಲ್ಲೆಯ ಮತದಾನ ಪ್ರಮಾಣ ಈ ಹಿಂದಿನ ಚುನಾವಣಾ ಮತದಾನಕ್ಕಿಂತ ಅಧಿಕಗೊಳಿಸುವಲ್ಲಿ ಸಹಕಾರ ನೀಡಿದ್ದು, ಎಲ್ಲರಿಗು ಧನ್ಯವಾದಗಳು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಹೇಳಿದ್ದಾರೆ.
ಮತದಾನವು ಜನತೆಯ ಯಾವುದಾದರೂ ವಿಷಯ, ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯಗಳನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ. ಲೋಕಸಭೆ ಚುನಾವಣೆ ಮತದಾನದ ಪ್ರಕ್ರಿಯೆಯನ್ನು ಅತ್ಯಂತ ಶಾಂತಿಯುತ ಹಾಗೂ ಸುಗಮವಾಗಿ ನಡೆಸಲು ಸಹಕರಿಸಿದ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಧನ್ಯವಾದಗಳು ಎಂದು ಹೇಳಿದ್ದಾರೆ.