ವಿಜಯಪುರ : ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಮಗುವನ್ನು ಕೊನೆಗೆ ರಕ್ಷಿಸಲಾಗಿದೆ. ಕೊನೆಗೂ ಮಗುವಿನ ತಾಯಿಯ ಪ್ರಾರ್ಥನೆ ಫಲಿಸಿದ್ದು, ಸಾತ್ವಿಕ್ ಅನ್ನು ರಕ್ಷಣಾ ತಂಡಗಳು ಯಶಸ್ವಿಯಾಗಿ ರಕ್ಷಿಸಿವೆ. ಸ್ಥಳದಲ್ಲಿಯೇ ಆಂಬುಲೆನ್ಸ್ ಹಾಗೂ ವೈದ್ಯರು ಬೀಡು ಬಿಟ್ಟಿದ್ದರಿಂದ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಸತೀಶ ಮುಜಗೊಂಡ – ಪೂಜಾ ಮುಜಗೊಂಡ ದಂಪತಿಯ ಮಗು ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿತ್ತು.
ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರಿಂದ ಕೊಳವೆ ಬಾವಿಯಿಂದ ಮಗುವನ್ನು ಹೊರತೆಗೆದ ತಕ್ಷಣ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಲಾಗಿದೆ. 500 ಅಡಿ ತೆರೆದ ಕೊಳವೆ ಬಾವಿಗೆ ಮಗು ಬಿದ್ದಿದ್ದು, 20 ಅಡಿ ಮೇಲೆಯೇ ಮಗು ಸಿಲುಕಿಕೊಂಡಿದ್ದರಿಂದ ರಕ್ಷಣಾ ಕಾರ್ಯಾಚರಣೆ ಈಗ ಮುಗಿದಿದೆ. ತಲೆಕೆಳಗಾಗಿ ಬಿದ್ದಿದ್ದರಿಂದ ಪೈಪ್‌ನಲ್ಲಿ ಮಗು ಸಿಲುಕಿತ್ತು. ಎರಡು ಕೈಗಳು ದೇಹಕ್ಕೆ ಹೊತ್ತಿಕೊಂಡಿದ್ದವು. ಈ ಹಿನ್ನೆಲೆ ಮಗುವನ್ನು ಹೊರತೆಗೆಯಲು ಸ್ವಲ್ಪ ಕಷ್ಟವಾಯ್ತು.
ನಿನ್ನೆ ಸಂಜೆ 6 ಗಂಟೆಯಿಂದ ಅಗ್ನಿಶಾಮಕದಳ ಹಾಗೂ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ಶುರು ಮಾಡಿದ್ದವು. ಕೊಳವೆ ಬಾವಿ ಪಕ್ಷ 20 ಅಡಿಗಳಷ್ಟು ಆಳದ ಗುಂಡಿ ತೆಗೆಯಲಾಗಿದ್ದು, ಅಲ್ಲಿಂದ ಕೊಳವೆ ಬಾವಿಗೆ ಸುರಂಗ ನಿರ್ಮಿಸಿ ಮಗುವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.