ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಜೀಗೇರಿ ಗ್ರಾಮದಲ್ಲಿ ಇಂದು ಜಮೀನಿನಲ್ಲಿ ಬಾಳೆಗೋಣಿ ಕತ್ತರಿಸುವಾಗ ಯುವಕನ ಮೇಲೆ ಚಿರತೆಯೊಂದು ದಾಳಿ ಮಾಡಿ ಅದೃಷ್ಟಾವತ 18 ವರ್ಷದ ಯುವಕ ಪಾರಾದ ಘಟನೆ ನಡೆದಿದೆ.
ಜೀಗೇರಿ ಗ್ರಾಮದ ಉದಯ ಶರಣಪ್ಪ ನಿಡಶೇಸಿ (18) ಚಿರತೆ ದಾಳಿಗೆ ಒಳಗಾದ ಯುವಕನಾಗಿದ್ದು ಜಮೀನಿನಲ್ಲಿ ಬಾಳೆಗೋಣಿ ಕತ್ತರಿಸುವ ವೇಳೆ ಚಿರತೆ ಯುವಕನ ಮೇಲೆ ದಾಳಿ ಮಾಡಿ ಯುವಕನ ಎದೆಗೆ ಬಾಯಿ ಹಾಕಿ, ಮೈ ಹಾಗೂ ಬೆನ್ನಿನ ಮೇಲೆ ಊಗುರಿನಿಂದ ಚಬರಿಕೊಂಡಿದೆ.
ಜಮೀನಿನಲ್ಲಿ ಚಿರತೆಯ ದಾಳಿಯಿಂದ ಅಕ್ಕಪಕ್ಕದಲ್ಲಿದ್ದ ಉಳಿದ ಕಾರ್ಮಿಕರು ಕೂಗಾಡಿದ್ದಾರೆ. ಚಿರತೆ ಜನರ ಕೂಗುವಿಕೆ ಭೀತಿಯಿಂದ ಓಡಿದೆ. ಯುವಕ ಕೂದಲೆಳೆಯಲ್ಲಿ ಪಾರಾಗಿದ್ದಾನೆ. ಗಾಯಗೊಂಡ ಯುವಕನನ್ನು ಗಜೇಂದ್ರಗಡ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಉಪ ವಲಯ ಅರಣ್ಯಧಿಕಾರಿ ಪ್ರವೀಣಕುಮಾರ ಸಾಸಿವಹಳ್ಳಿ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದ್ದಾರೆ. ಜೀಗೇರಿ ಗ್ರಾಮದಲ್ಲಿ 5 ದಿನದ ಹಿಂದೆಯೇ ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಒಂದು ಬೋನ್ ಇಟ್ಟಿದ್ದರು.