ಗದಗ: ಬಸ್ ನಿಲ್ದಾಣದ ಸ್ವಚ್ಛತೆ ಹಾಗೂ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕರ ನಿರ್ದೇಶಕ ಎಸ್. ಭರತ ಸೂಚಿಸಿದರು.
ಅವರು ಮಂಗಳವಾರದಂದು ಗದಗ ವಿಭಾಗಕ್ಕೆ ಭೇಟಿ ನೀಡಿ ಗದಗ ವಿಭಾಗದ ಕಾರ್ಯಾಚರಣೆ ಹಾಗೂ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ಹಾಗೂ ಫೆಬ್ರುವರಿ 3 ರಂದು ಗದಗ ಹೊಸ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ನೂತನ ಬಸ್‍ಗಳ ಲೋಕಾರ್ಪಣೆ ಹಾಗೂ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಕಾರ್ಯಕ್ರಮ ಕುರಿತು ಸಭೆಯನ್ನು ನಡೆಸಿ ಮಾತನಾಡಿದರು.
ಪ್ರಸ್ತುತ ಶಕ್ತಿ ಯೋಜನೆ ಅನುಷ್ಠಾನದಲ್ಲಿದ್ದು, ವಾಹನಗಳ ಕಡೆಗೆ ಹೆಚ್ಚು ಗಮನ ಕೊಡಬೇಕು. ಸಾರ್ವಜನಿಕ ಪ್ರಯಾಣಿಕರ ಉಪಯೋಗಕ್ಕಾಗಿ ಗದಗ-ಹುಬ್ಬಳ್ಳಿ ಮಾರ್ಗದಲ್ಲಿ ಹೊಸ ಇಲೆಕ್ಟ್ರಿಕ್ ವಾಹನಗಳನ್ನು ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದ್ದು, ಬಸ್ ನಿಲ್ದಾಣಗಳಲ್ಲಿ ಚಾರ್ಜರ್ ಪಾಯಿಂಟಗಳನ್ನು ಹಾಗೂ ಅದಕ್ಕೆ ಬೇಕಾಗುವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಜನದಟ್ಟಣೆ ಅವಧಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ಟ್ರಿಪ್ಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಫೆಬ್ರುವರಿ ಹಾಗೂ ಮಾರ್ಚ ತಿಂಗಳಾಂತ್ಯದೊಳಗೆ ಗದಗ ವಿಭಾಗಕ್ಕೆ 40 ಹೊಸ ವಾಹನಗಳನ್ನು ಹಂತ ಹಂತವಾಗಿ ಪೂರೈಕೆ ಮಾಡಲಾಗುವದು. ಸೂಕ್ತ ಮಾರ್ಗದಲ್ಲಿ ಕಾರ್ಯಾಚರಣೆಗೆ ಯೋಜನೆ ರೂಪಿಸುವಂತೆ ಎಸ್.ಭರತ್ ಸೂಚಿಸಿದರು.
ಫೆಬ್ರುವರಿ 3 ರಂದು ಗದಗ ಹೊಸ ಬಸ್ ನಿಲ್ದಾಣದಲ್ಲಿ ನಡೆಸಲು ಆಯೋಜಿಸಿದ ನೂತನ ಬಸ್ಸುಗಳ ಲೋಕಾರ್ಪಣೆ ಹಾಗೂ ಅಪಘಾತ ರಹಿತ ಚಾಲಕರಿಗೆ ಬೆಳ್ಳಿಪದಕ ವಿತರಣೆ ಹಾಗೂ UPI ವ್ಯವಸ್ಥೆ ಜಾರಿಗೊಳಿಸುವ ಕಾರ್ಯಕ್ರಮದಲ್ಲಿ ಸಚಿವರುಗಳು ಹಾಗೂ ಗಣ್ಯವ್ಯಕ್ತಿಗಳು ಆಗಮಿಸುತ್ತಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು. ಗದಗ ಹೊಸ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಕಾರ್ಯಕ್ರಮ ನಡೆಸುವ ಜಾಗೆ ಹಾಗೂ ಕಾರ್ಯಕ್ರಮದ ರೂಪು ರೇಷೆಗಳ ಕುರಿತು ಪರಿಶೀಲಿಸಿ ಸೂಕ್ತ ಸಲಹೆ ನೀಡಿದರು.
ಸಭೆಯಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು ವಿವೇಕಾನಂದ ವಿಶ್ವಜ್ಞೆ ಹಾಗೂ ಮುಖ್ಯ ತಾಂತ್ರಿಕ ಶಿಲ್ಪಿ ರಘುನಾಥ, ಕೇಂದ್ರ ಕಛೇರಿ ಹುಬ್ಬಳ್ಳಿ ಹಾಗೂ ಡಿ.ಎಂ. ದೇವರಾಜ, ವಿಭಾಗೀಯ ನಿಯಂತ್ರಣಾಧಿಕಾರಿ, ಪಿ ವೈ ಗಡೇದ ವಿಭಾಗೀಯ ತಾಂತ್ರಿಕ ಶಿಲ್ಪಿ ಕೆ.ಎನ್. ಮಂಜುನಾಥ ಕಾನೂನು ಅಧಿಕಾರಿ, ಹಾಗೂ ವಿಭಾಗದ ಅಧಿಕಾರಿ ಮತ್ತು ಘಟಕ ವ್ಯವಸ್ಥಾಪಕರು ಉಪಸ್ಥಿತರಿದ್ದರು.