ಗದಗ : ರ್ಯಾಪಿಡ್ ಆಕ್ಷನ್ ಪೋರ್ಸನಿಂದ ಜನೇವರಿ 19 ರಿಂದ 25ರ ವರೆಗೆ ಜಿಲ್ಲೆಯಾದ್ಯಂತ ರೂಟ್ ಮಾರ್ಚ್ ನಡೆಸಲು ಆರ್ ಎ ಎಪ್ ತಂಡ ನಗರಕ್ಕೆ ಆಗಮಿಸಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಜಿಲ್ಲೆಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಅಲ್ಲಿನ ಮಾಹಿತಿ ಪಡೆಯುವದು ಈ ರೂಟ್ ಮಾರ್ಚನ ಉದ್ದೇಶವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ತಿಳಿಸಿದರು.
ನಗರದ ಶಹರ ಪೋಲಿಸ್ ಠಾಣೆಯಲ್ಲಿ ಜರುಗಿದ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಆರ್.ಎ.ಎಫ್ ತಂಡ ಜಿಲ್ಲೆಗೆ ಕರ್ತವ್ಯಕ್ಕೆ ಆಗಮಿಸಿದಾಗ ಸ್ಥಳ ಹಾಗೂ ಇಲ್ಲಿನ ವಾತಾವರಣ, ಸಂಸ್ಕೃತಿಯ ಬಗ್ಗೆ ಮಾಹಿತಿ ಪಡೆಯಲು ಈ ತಂಡವು ಆಗಮಿಸಿದ್ದು ಜಿಲ್ಲೆಯ ಪ್ರಮುಖ ನಗರ ಹಾಗೂ ಶಹರ ವ್ಯಾಪ್ತಿಯಲ್ಲಿ ಪಥ ಸಂಚಲನ ಜರುಗಿಸಲಾಗುವದು ಎಂದರು. ಆರ್.ಎ.ಎಫ್ ತಂಡಕ್ಕೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಾವು ನಿರ್ವಹಿಸುವ ಸ್ಥಳ ಅಪರಿಚಿತ ಆಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಎರ್ಪಡಿಸಲಾಗಿದೆ. ಜಿಲ್ಲೆಗೆ ಆಗಮಿಸಿದ ಆರ್.ಎ.ಎಫ್. ತಂಡಕ್ಕೆ ಗದಗ ಜಿಲ್ಲಾ ಪೋಲಿಸ್ ಇಲಾಖೆಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.
80 ಪುರುಷ ಹಾಗೂ 7 ಜನ ಮಹಿಳಾ ಸೈನಿಕರ ಆರ್.ಎ.ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ಈ ತಂಡವು ಜ. 20 ರಂದು ಲಕ್ಷ್ಮೇಶ್ವರ, ಮುಳಗುಂದ, ಜ. 21 ರಂದು ನರಗುಂದ, ಜ. 22 ರಂದು ಮುಂಡರಗಿ, ಜ. 23 ರಂದು ರೋಣ, ಗಜೇಂದ್ರಗಡ, ಜ. 24 ರಂದು ಶಿರಹಟ್ಟಿ, ಬೆಟಗೇರಿ, ಜ. 25 ರಂದು ಗದಗ ಪೋಲಿಸ್ ಹಾಗೂ ಸಿವಿಲ್ ಪೋಲಿಸ್ ಮದ್ಯ ವ್ಹಾಲಿಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಮಾಹಿತಿ ನೀಡಿದರು.
ತಂಡದ ಅಸಿಸ್ಟಂಟ್ ಕಮಾಂಡೆಂಟ್ ಪ್ರದೀಪ್ ಡಿ ಟಿ ಮಾತನಾಡಿ ಯಾವುದೇ ಒತ್ತಡಗಳಿಗೆ ಒಳಗಾಗದೇ ಜನರ ನಾಡಿಮಿಡಿತ, ಇಲ್ಲಿನ ಸಂಸ್ಕೃತಿ ತಿಳಿಯುವ ಹಾಗೂ ಜನರ ವಿಶ್ವಾಸ ಗಳಿಸುವ ಉದ್ದೇಶದೊಂದಿಗೆ ಈ ರೂಟ್ ಮಾರ್ಚನ್ನು ಜರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಸೀಸ್ಟಂಟ ಕಮಾಂಡಂಟ ಬಿ.ಸಿ.ರಾಯ್, ಡಿ.ಎಸ್.ಪಿ. ವಿದ್ಯಾನಂದ ನಾಯಕ, ಸಿ.ಪಿ.ಐ. ಡಿ.ಬಿ.ಪಾಟೀಲ ಉಪಸ್ಥಿತರಿದ್ದರು.
ಪತ್ರಿಕಾ ಗೋಷ್ಠಿ ನಂತರ ಆರ್.ಎ.ಎಫ್ ತಂಡದಿಂದ ಶಹರ ಠಾಣೆಯಿಂದ ಪ್ರಾರಂಭವಾದ ರೂಟ್ ಮಾರ್ಚ ಡಿಸಿ ಮೀಲ್ ರೋಡ್, ಜವಳಗಲ್ಲಿ, ಕೆ ಎಚ್ ಪಾಟೀಲ್ ಸರ್ಕಲ್, ಗಂಗಾಪುರ ಪೇಟೆ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊನೆಗೆ ಶಹರ ಠಾಣೆಗೆ ಬಂದು ಮುಕ್ತಾಯಗೊಂಡಿತು.