ನವೋದ್ಯಮ ಯೋಜನೆಯಡಿ ಸಾಲ ಹಾಗೂ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಅಹ್ವಾನ

graochandan1@gmail.com
1 Min Read

ಗದಗ : ಜನೆವರಿ 16: ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇ. 50 ರಷ್ಟು ಸಹಾಯಧನ (ಕನಿಷ್ಠ ರೂ. 5 ಲಕ್ಷದಿಂದ ಗರಿಷ್ಠ ರೂ. 20 ಲಕ್ಷಗಳವರೆಗೆ) ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುವುದು. ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗಾಗಿ ಹಾಗೂ ಉನ್ನತೀಕರಣಕ್ಕಾಗಿ ಯೋಜನಾ ವರದಿಯ ಶೇ. 50 ರಷ್ಟು ಸಹಾಯಧನವನ್ನು (ಕನಿಷ್ಠ ರೂ. 20 ಲಕ್ಷದಿಂದ ಗರಿಷ್ಠ ರೂ. 50 ಲಕ್ಷಗಳವರೆಗೆ) ಕೃಷಿ ವಲಯದ ನವೋದ್ಯಮಿಗಳಿಗೆ ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುವುದು. ಪ್ರಸಕ್ತ 2023-24 ರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು “ನವೋದ್ಯಮ” ಎಂಬ ಹೊಸ ಯೋಜನೆಯನ್ನು ಸರ್ಕಾರದಿಂದ ಘೋಷಿಸಲಾಗಿದೆ.

ರೈತರು ನೂತನ ತಾಂತ್ರಿಕತೆಗಳನ್ನು ಅಳವಡಿಸುವ ಪರಿಕಲ್ಪನೆಗೆ ಹೊಂದುವಂತೆ ಹಾಗೂ ರೈತರ ಆದಾಯ ವೃದ್ಧಿಸುವಲ್ಲಿ ಸಹಕಾರಿಯಾಗುವಂತೆ ರಾಜ್ಯಾದ್ಯಂತ ಕೃಷಿ ವಲಯದಲ್ಲಿ ನೂತನ ಅವಿಷ್ಕಾರಗಳು, ನವೀನ ಉತ್ಪನ್ನಗಳು ಹಾಗೂ ಸೇವೆಗಳನ್ನು ಒಳಗೊಂಡಿರುವ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಂದ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ತಾರಾಮಣಿ ಜಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share this Article