ಕರ್ನಾಟಕ-50 ರ ಸಂಭ್ರಮ ಅಂಗವಾಗಿ 500 ಕ್ಕೂ ಹೆಚ್ಚು ಗಾಳಿಪಟ ಹಾರಿಸಿದ ಶಾಲೆ ಮಕ್ಕಳು 

ಸಮಗ್ರ ಪ್ರಭ ಸುದ್ದಿ
2 Min Read

ಗದಗ :- ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಸಂಭ್ರಮದಿಂದ ಆಚರಿಸುವ ಹಿನ್ನೆಲೆಯಲ್ಲಿ ಮೆಣಸಗಿ ಹಾಗೂ ಹೊಳೆಮಣ್ಣೂರು ಗ್ರಾಮ ಪಂಚಾಯತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಗಾಳಿಪಟ ತಯಾರಿಸುವ ಹಾಗೂ ಹಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಆಲೂರು ವೆಂಕಟರಾಯರ ಜನ್ಮ ಸ್ಥಳದ ನೆರೆಯ ಹೊಳೆ ಮಣ್ಣೂರು ಹಾಗೂ ಮೆಣಸಗಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಉತ್ಸಾಹ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಇಚ್ಛಾಶಕ್ತಿಯಿಂದಾಗಿ ಇಲ್ಲಿಯ 500 ಕ್ಕೂ ಹೆಚ್ಚು ಮಕ್ಕಳು ಸ್ವತಃ ಗಾಳಿಪಟ ತಯಾರಿಸಿ ಹಾರಿಸಿ ಸಂಭ್ರಮಿಸುತ್ತಿದ್ದಾರೆ.

ಈ ಎರಡೂ ಗ್ರಾಮ ಪಂಚಾಯ್ತಿಗಳಿಂದ ಗ್ರಂಥಾಲಯ ಮೇಲ್ವಿಚಾರಕರು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಗ್ರಾಮ ಪಂಚಾಯತಿ ಸಿಬ್ಬಂದಿ ರವರು ಮಕ್ಕಳಿಗೆ ಗಾಳಿಪಟ ತಯಾರಿಸುವ ಕುರಿತು ತರಬೇತಿ ನೀಡಿ ಕೆಂಪು ಹಾಗೂ ಹಳದಿ ಬಣ್ಣದ ಹಾಳೆಗಳನ್ನು ಪೂರೈಸಿರುತ್ತಾರೆ.

ಮಕ್ಕಳು ಸ್ಥಳೀಯವಾಗಿ ದೊರೆಯಬಹುದಾದ ಬಿದಿರು ಹಾಗೂ ತೆಂಗಿನ ಕಡ್ಡಿಗಳಿಂದ ಗಾಳಿಪಟ ಗಳನ್ನು ತಯಾರಿಸಿ ಸೂತ್ರ ಜೋಡಿಸಿ ಬಾಲನ್ಗೋಸಿ ಕಟ್ಟಿ ಒಬ್ಬರಿಗಿಂತ ಒಬ್ಬರು ಅಂದವಾದ ಗಾಳಿಪಟ ಗಳನ್ನು ಪ್ರತಿದಿನ ಶಾಲೆಗೆ ತಂದು ಪ್ರದರ್ಶಿಸುವುದೇ ಸುಂದರವಾಗುವದರ ಜೊತೆಗೆ ಆಕರ್ಷಣಿಯವಾಗಿದೆ..

ಗಾಳಿಪಟ ತಯಾರಿಸಿ ಹಾರಿಸುವುದನ್ನು ಕಂಡು ಮನೆಯಲ್ಲಿರುವ ಪಾಲಕರು ಪೋಷಕರು ತಮ್ಮ ಬಾಲ್ಯ ನೆನಪಿಸಿಕೊಂಡು ಮಕ್ಕಳಿಗೂ ಇಂತಹ ಅವಕಾಶ ಒದಗಿಸಿರುವ ಗ್ರಾಮ ಪಂಚಾಯಿತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಅಲ್ಲದೆ ತಾವು ಕೂಡ ಮಕ್ಕಳಿಗೆ ಗಾಳಿಪಟ ತಯಾರಿಸುವಲ್ಲಿ ನೆರವಾಗಿದ್ದಾರೆ.

ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರ ಉತ್ತಮವಾಗಿ ಗಾಳಿಪಟ ತಯಾರಿಸಿ ಹಾರಿಸಿದ ವಿದ್ಯಾರ್ಥಿಗಳ ಪೈಕಿ ತರಗತಿವಾರು ಪ್ರಥಮ ದ್ವಿತೀಯ ದ್ವಿತೀಯ ಹಾಗೂ ಸಮಾಧಾನಕರ ಬಹುಮಾನಕ್ಕಾಗಿ ವಿದ್ಯಾರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದು ಬಹುಮಾನ ಪಡೆಯಲಿರುವ ಮಕ್ಕಳ ಸಂಖ್ಯೆಯೇ 100 ದಾಟಿದೆ.

ಗ್ರಾಮೀಣ ಕ್ರೀಡೆಗಳು ಮಹತ್ವ ಕಳೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳಿಗೆ ಗಾಳಿಪಟ ತಯಾರಿಸುವ ತರಬೇತಿ ನೀಡಿ ಅಗತ್ಯ ಪರಿಕರಗಳನ್ನು ಒದಗಿಸುವ ಮೂಲಕ ಮಕ್ಕಳು ವಿನೂತನವಾಗಿ ಯೋಚಿಸುವಂತೆ ಸಂಭ್ರಮಿಸುವಂತೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯ.

–  ಸುಜಾತ ಮ ಮಠಪತಿ, ಅಧ್ಯಕ್ಷರು ಗ್ರಾಮ ಪಂಚಾಯತಿ ಹೊಳೆ ಮಣ್ಣೂರು.

ಕರ್ನಾಟಕ 50ರ ಸಂಭ್ರಮದ ನಿಮಿತ್ಯ ನಮ್ಮ ಶಾಲೆಯ ಮಕ್ಕಳು ಗಾಳಿಪಟ ತಯಾರಿಸಿ ಹಾರಿಸಿ ಸಂಭ್ರಮಿಸುತ್ತಿರುವುದು ನಮಗೆ ಖುಷಿ ತಂದಿದೆ.
– ಈಶ್ವರಪ್ಪ ಮುದೇನೂರು, ಅಧ್ಯಕ್ಷರು ಗ್ರಾಮ ಪಂಚಾಯತಿ ಮೆಣಸಗಿ.

Share this Article