ಬೆಂಗಳೂರು: ಬಿಜೆಪಿಯ ಶಕ್ತಿ ಕೇಂದ್ರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಶಿಕಾರಿಪುರ ಕ್ಷೇತ್ರದ ಶಾಸಕ, ಯುವ ನಾಯಕ ಬಿ ವೈ ವಿಜಯೇಂದ್ರ ಅವರು ಇಂದು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ರಾಜ್ಯ ಬಿಜೆಪಿಯ ಹಿರಿಯ ನಾಯಕರು, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಜಯೇಂದ್ರ ಅವರಿಗೆ ಕೇಸರಿ ಶಾಲು ತೊಡಿಸಿ ಸನ್ಮಾನಿಸಿ ಅಧಿಕಾರ ಹಸ್ತಾಂತರ ಮಾಡಿದರು.
ಇದಕ್ಕೂ ಮುನ್ನ ವಿಜಯೇಂದ್ರ ಅವರು ತಂದೆ ಯಡಿಯೂರಪ್ಪನವರ ಕಾಲಿಗೆ ನಮಸ್ಕರಿಸಿ ಬಿಜೆಪಿ ಕಚೇರಿಯಲ್ಲಿ ಹೋಮ,ಹವನ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ, ಆರ್ ಅಶೋಕ್, ಬಸವರಾಜ ಬೊಮ್ಮಾಯಿ, ವಿ ಗೋಪಾಲಯ್ಯ, ಆದರ ಜ್ಞಾನೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.