ಪೌರಾಣಿಕ ಹಿನ್ನೆಲೆಯ ಬೆಳಕಿನ ಹಬ್ಬ ದೀಪಾವಳಿ ಬಡವ ಬಲ್ಲಿದರಿಗೂ ಬಹು ದೊಡ್ಡ ಹಬ್ಬ. ಅಂಧಕಾರ, ಅಹಂ, ಸಂಕಷ್ಟ, ದುಃಖ, ನೋವು ಸೇರಿದಂತೆ ಇತ್ಯಾದಿ ಕತ್ತಲಿನ ರೂಪದ ಸಂಕಷ್ಟಗಳಿಂದ ಸುಖ, ಶಾಂತಿ, ನೆಮ್ಮದಿ, ಲಾಭ, ಖುಷಿ, ಉತ್ತಮ ಬೆಳವಣಿಗೆಯಂತಹ ಬೆಳಕಿನ ಕಡೆಗೆ ಕರೆದೊಯುವ ದೀಪದ ಹಬ್ಬವಾಗಿದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಈ ಹಬ್ಬದ ಕೆಲವು ಆಚರಣೆಗಳು ಪರಿಸರಕ್ಕೆ ಹಾನಿಯಾಗಿ ಪರಿಣಮಿಸುತ್ತಿರುವುದು ನೋವಿನ ಸಂಗತಿಯಾಗಿದೆ.
ಸದ್ಯ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಜಗತ್ತಿನ ದೊಡ್ಡ ಭೂತಗಳಾಗಿ ಕಾಡುತ್ತಿವೆ. ಇದರ ಜೊತೆಯಲ್ಲಿ ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ವಸ್ತುಗಳೂ ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ. ಪ್ರಾಣಿ, ಪಕ್ಷಿ ಹಾಗೂ ಕೀಟಗಳಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಇನ್ನು ಆಕಾಶದೊಡಲು ಸೇರುವ ಮಾಲಿನ್ಯ, ಮನುಷ್ಯನಿಗೇ ಪ್ರತಿಕೂಲವಾಗಿ ಕಾಡುತ್ತದೆ ಎಂಬ ಅರಿವು ಮೂಡಿಸುವ ಅವಶ್ಯಕತೆ ತುಂಬಾ ಇದೆ.
ಹಾಗಾಗಿ, ಇವೆಲ್ಲಕ್ಕೂ ಹೊರತಾದ ದೀಪಾವಳಿಯನ್ನು ನಾವು ಆಚರಿಸುವ ಸಂಕಲ್ಪವನ್ನು ಮಾಡುವ ಅತ್ಯವಶ್ಯಕತೆ ಇದೆ. ಇದರಿಂದ ನಮ್ಮನ್ನು ಹೊತ್ತು ಪೊರೆಯುತ್ತಿರುವ ಪ್ರಕೃತಿಗೂ ಒಳಿತು. ಆದ್ದರಿಂದ ಈ ಹಬ್ಬದಲ್ಲಿ ಪಟಾಕಿ, ಪ್ಲಾಸ್ಟಿಕ್, ರಾಸಾಯನಿಕ ವಸ್ತುಗಳ ಬಳಕೆಯನ್ನು ದೂರ ಮಾಡಿ ಎಂದು ಪ್ರತಿಯೊಬ್ಬರಿಗೂ ಕೈಮೂಗಿದು ಮನವಿ ಮಾಡಿಕೊಳ್ಳುವೆ. ಚಳಿಗಾಲದಲ್ಲಿ ದೀಪಾವಳಿ ಆಚರಿಸಲು ವೈಜ್ಞಾನಿಕ, ಪೌರಾಣಿಕ ಕಾರಣವಿದೆ ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ದೀಪಗಳನ್ನು ಬೆಳಗಲು ಪ್ರಯತ್ನಿಸಿ. ಖುಷಿ ಪಡುವ ಹಾಗೆ ಪೂಜೆ ಪುನಸ್ಕಾರಗಳನ್ನು ಮಾಡಲು ಪ್ರಯತ್ನಿಸಿ. ವಿವಿಧ ಬಗೆಯ ಸಿಹಿ ಮಾಡಿ ಎಲ್ಲರ ಜೊತೆಗೂಡಿ ಹಂಚಿ ತಿನ್ನುವ ಸಂಕಲ್ಪಕ್ಕೆ ಮುಂದಾಗಿ.
ಈ ದೀಪಾವಳಿಯ ದೀಪವು ಬದುಕಿಗೆ ದಾರಿದೀಪ, ಕನಸುಗಳಿಗೆ ಆಶಾದೀಪ, ಸಾಧನೆಗೆ ಸ್ಪೂರ್ತಿದೀಪ, ನಗು ನಲಿವಿಗೆ ನಂದಾದೀಪ ಆಗಲಿ ಎಂದು ಹಾರೈಸುವೆವು.
ಸಂಗ್ರಹ: ಚಂದ್ರು ಎಂ. ರಾಥೋಡ್

