545 ಪಿಎಸ್‍ಐ ನೇಮಕಾತಿಗೆ ಮರು ಪರೀಕ್ಷೆಗೆ ಹೈಕೋರ್ಟ್ ಆದೇಶ

ಸಮಗ್ರ ಪ್ರಭ ಸುದ್ದಿ
2 Min Read

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರವನ್ನು ಬಿಟ್ಟುಬಿಡದಂತೆ ಪೆಡಂಬೂತವಾಗಿ ಕಾಡಿದ್ದ 545 ಪಿಎಸ್‍ಐ ನೇಮಕಾತಿ ಪರೀಕ್ಷೆ ರದ್ದುಪಡಿಸಿದ್ದ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಮರುಪರೀಕ್ಷೆ ನಡೆಸಲು ಆದೇಶ ನೀಡಿದೆ. ಸ್ವತಂತ್ರ ಸಂಸ್ಥೆಯಿಂದ ಪಿಎಸ್‍ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಬೇಕೆಂದು ಹೈಕೋರ್ಟ್ ಆದೇಶಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಈ ಹಿಂದೆ ಪರೀಕ್ಷೆ ಬರೆದು ನೇಮಕಗೊಂಡಿದ್ದ ಅಭ್ಯರ್ಥಿಗಳಿಗೆ ತೀವ್ರ ನಿರಾಸೆಯಾಗಿದೆ.

ಸುದೀರ್ಘ ವಿಚಾರಣೆ ನಡೆಸಿ ಇಂದಿಗೆ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಾದ ದಿನೇಶ್‍ಕುಮಾ, ಟಿ.ಜಿ.ಶಿವಶಂಕರೇಗೌಡ ಅವರನ್ನೊಳಗೊಂಡ ದ್ವಿಸದಸ್ಯಪೀಠ ಹಿಂದಿನ ಬಿಜೆಪಿ ಸರ್ಕಾರ ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿದ್ದನ್ನು ಎತ್ತಿ ಹಿಡಿಯಿತು.

ಸರ್ಕಾರದ ಆದೇಶ ರದ್ದು ಕೋರಿ ಎನ್.ವಿ.ಚಂದನ್ ಸೇರಿದಂತೆ ಪಿಎಸ್‍ಐ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 100 ಅಕ ಅಭ್ಯರ್ಥಿಗಳು ಸಲ್ಲಿಸಿರುವ ತಕರಾರು ಅರ್ಜಿಗಳ ವಿಚಾರಣೆಯನ್ನು 2023ರ ಅ.26ರಂದು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಲಾಗಿತ್ತು. ಮೇಲ್ನೋಟಕ್ಕೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿರುವುದರಿಂದ ರದ್ದುಪಡಿಸಿರುವ ಸರ್ಕಾರದ ಕ್ರಮ ಸರಿಯಾಗಿದೆ ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

ಸುಮಾರು 3600ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯಲ್ಲಿ ಈಗಾಗಲೇ ಬಂಧನಕ್ಕೊಳಪಟ್ಟಿರುವ ಆರೋಪಿಗಳಿಂದ ಹೇಳಿಕೆಗಳನ್ನು ಪಡೆಯಲಾಗಿದ್ದು, ಕೆಲವರು ತಪ್ಪು ಒಪ್ಪಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿರುವುದರಿಂದ ಮುಂದೆ ಸ್ವತಂತ್ರ ಸಂಸ್ಥೆಯಿಂದ ಮರುಪರೀಕ್ಷೆ ನಡೆಸಬೇಕೆಂದು ಆದೇಶ ಮಾಡಿತು.

ಪ್ರಕರಣದ ಹಿನ್ನಲೆ:

ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಅಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಇದಕ್ಕೆ ಪಿಎಸ್‍ಐ ಆಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡುವಂತೆ ಒತ್ತಾಯಿಸಿದ್ದರು. ಬಳಿಕ ಸರ್ಕಾರದ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು 2022ರ ಜು.19ರಂದು ಕೆಎಟಿ ವಜಾಗೊಳಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪಿಎಸ್‍ಐ ನೇಮಕಾತಿಗೆ ಹೊಸದಾಗಿ ಲಿಖಿತ ಪರಿಕ್ಷೆ ನಡೆಸುವ ಸರ್ಕಾರದ ಆದೇಶಕ್ಕೆ 2022ರ ಸೆ.27ರಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಬಳಿಕ ಆ ತಡೆಯಾಜ್ಞೆ ವಿಸ್ತರಣೆಯಾಗುತ್ತಾ ಬಂದಿದೆ. ವಿಭಾಗೀಯ ಪೀಠವು ಅರ್ಜಿಗಳ ವಿಚಾರಣೆಯನ್ನು 2023ರ ಅ.26ರಂದು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.

ಅರ್ಜಿ ಕುರಿತು ಆಗಸ್ಟ್ ತಿಂಗಳಿನಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಕ್ರಮ ನಡೆದ ಹಿನ್ನೆಲೆಯಲ್ಲಿ ಪಿಎಸ್‍ಐ ಮರುಪರೀಕ್ಷೆ ನಡೆಸಬಹುದು ಎಂದು ಮೌಖೀಕವಾಗಿ ಅಭಿಪ್ರಾಯಪಟ್ಟಿತ್ತು. ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಸೇರಿ ಹಲವರನ್ನು ಸಿಐಡಿ ಬಂಧಿಸಿ ವಿಚಾರಣೆ ನಡೆಸಿತ್ತು. ಜೊತೆಗೆ ಅಕ್ರಮ ಎಸಗಿ ಪರೀಕ್ಷೆಯಲ್ಲಿ ಪಾಸ್ ಆಗಿ ಪಿಎಸ್‍ಐ ಆಗಿ ಆಯ್ಕೆಯಾಗಿದ್ದವರನ್ನು ಮತ್ತು ಅಕ್ರಮಕ್ಕೆ ಸಹಾಯ ಮಾಡಿದ್ದವರನ್ನು ಬಂಧಿಸಲಾಗಿತ್ತು.

ಮರುಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶಿಸಿರುವುದರಿಂದ ಹೊಸದಾಗಿ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ. ಏಕೆಂದರೆ ಈ ಹಿಂದೆ ಯಾವೆಲ್ಲ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರೋ ಪುನಃ ಅವರೇ ಮರುಪರೀಕ್ಷೆಗೆ ಹಾಜರಾಗಬೇಕು. ಇಡೀ ಅಧಿಸೂಚನೆಯನ್ನೇ ಹಿಂದಿನ ಸರ್ಕಾರ ರದ್ದುಪಡಿಸಿದ್ದರೂ ಹೊಸದಾಗಿ ಮತ್ತೆ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿಲ್ಲ. ಹಿಂದಿನ ಅಧಿಸೂಚನೆಗೆ ಅನುಗುಣವಾಗಿಯೇ ಸ್ವತಂತ್ರ ಸಂಸ್ಥೆಯಿಂದ ಮರುಪರೀಕ್ಷೆಯನ್ನು ನಡೆಸಬೇಕಾಗುತ್ತದೆ.

Share this Article