ಬೆಂಗಳೂರು: ಲೋಕಸಭೆ ಚುನಾವಣೆಗೆ ಮುಂದಿನ ವರ್ಷದ ಜನವರಿ 2ನೇ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹ್ಮದ್ ತಿಳಿಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಸಚಿವರುಗಳನ್ನು ನಿಯೋಜನೆ ಮಾಡಲಾಗಿದ್ದು, ಶೇ.75ರಷ್ಟು ಸಚಿವರು ಜಿಲ್ಲೆಗಳಲ್ಲಿ ಸಭೆ ಮಾಡಿದ್ದಾರೆ.
ಮುಂದಿನ ಒಂದು ವಾರಗಳಲ್ಲಿ ಮಂತ್ರಿಗಳು ಹಾಗೂ ವೀಕ್ಷಕರುಗಳು ಲೋಕಸಭೆ ಚುನಾವಣೆಯ ಸಂಭಾವ್ಯ ಅಭ್ಯರ್ಥಿ ಕುರಿತು ವರದಿ ಸಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ನಂತರ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಉಸ್ತುವಾರಿ ಸಚಿವರಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚರ್ಚೆ ಮಾಡಿ ನಂತರ ನಮ್ಮ ಹೈಕಮಾಂಡ್ ಗೆ ವರದಿ ಸಲ್ಲಿಸಲಿದ್ದಾರೆ ಎಂದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಾವು ಲೋಕಸಭೆ ಚುನಾವಣೆ ತಯಾರಿ ಮಾಡಿದ್ದೇವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಮ್ಮ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿ ಆಗಿದ್ದು, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನಮ್ಮ ಸರ್ಕಾರ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ರೂಪಿಸುತ್ತಿದೆ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ನಮ್ಮ ಪಕ್ಷ ಕನಿಷ್ಠ 20 ಸೀಟುಗಳನ್ನು ರಾಜ್ಯದಲ್ಲಿ ಗೆದ್ದು, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದರು.

